ನ್ಯೂಸ್ ನಾಟೌಟ್ : ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇಟ್ಟು ಅದರಲ್ಲಿ ಕಟ್ಟಿದ್ದ ಮೇಕೆಯನ್ನೇ ಕಳ್ಳರು ಹೊತ್ತೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ಗ್ರಾಮದ ಬಳಿ ಬಾನುವಾರ ನಡೆದಿದೆ.
ಚನ್ನವಡೆಯನಪುರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕರು, ಕುರಿಗಳನ್ನು ಸಾಯಿಸಿತ್ತು, ಇದನ್ನು ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಮಾಹಿತಿಯ ಆಧಾರದಲ್ಲಿ ಚಿರತೆ ಸೆರಿ ಹಿಡಿಯಲು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಒತ್ತಾಯಕ್ಕಾಗಿ ಓಂಕಾರ ಅರಣ್ಯ ವಲಯದ ಅರಣ್ಯ ಅಧಿಕಾರಿ ಸತೀಶ್ ಕುಮಾರ್ ಚಿರತೆಗಾಗಿ ಬೋನ್ ಇರಿಸಿದ್ದರು.
ಚಿರತೆ ಆಹಾರಕ್ಕಾಗಿ ಬರಲು ಬೋನಿಗೆ ಮೇಕೆ ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಹಿಂದಿರುಗಿದ್ದರು. ಮರುದಿನ ಬಂದು ನೋಡಿದಾಗ ಬೋನಿನಲ್ಲಿ ಮೇಕೆ ಕಾಣೆಯಾಗಿತ್ತು, ಬೋನಿಗೆ ಚಿರತೆ ಬಿದ್ದಿರಲಿಲ್ಲ.
ಚಿರತೆ ಏನಾದರೂ ಬಂದು ಮೇಕೆಯನ್ನು ಎಳೆದೊಯ್ದಿರಬಹುದೆಂದು ಅನುಮಾನ ಪಟ್ಟು ಚಿರತೆ ಬಂದು ಹೋಗಿರುವ ಕುರುಹುಗಳನ್ನು ಹುಡುಕಿದರಾದರೂ, ಚಿರತೆ ಬಂದು ಹೋಗಿರುವ ಯಾವುದೇ ಕುರುಹುಗಳು ಸಿಗದ ಕಾರಣ ಇದು ಕಳ್ಳರ ಕೈಚಳಕ, ಕಳ್ಳರೇ ಮೇಕೆಯನ್ನು ಹೊತ್ತೊಯ್ದಿದ್ದಾರೆ ಎಂದು ಅರಣ್ಯ ಅಧಿಕಾರಿ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.