ನ್ಯೂಸ್ ನಾಟೌಟ್: ಒಡಿಶಾದ ರೈಲು ದುರಂತ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈ ದುರಂತದಲ್ಲಿ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆರಡು ನಿಮಿಷದಲ್ಲಿ ಇಡೀ ಬಾಲಾಸೂರ್ ಸ್ಮಶಾನವಾಗಿದೆ. ಈ ನಡುವೆಯೇ 110 ಕನ್ನಡಿಗರು ಬಚಾವಾದ ರೋಚಕ ಕಥೆ ಮೈ ಜುಂ ಎನಿಸುವಂತಿದೆ.
ಬೆಂಗಳೂರಿನ ಬಯ್ಯಪ್ಪನಹಳ್ಳಿಯಿಂದ ಹೊರಟಿದ್ದ ಯಶವಂತಪುರ – ಹೌರಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗ ಕಳಸದ ಸಮಂತ್ ಘಟನೆಯನ್ನು ಸವಿವರವಾಗಿ ವಿವರಿಸಿದ್ದು ಹೀಗೆ, “ರೈಲು ದಿಢೀರ್ ಬ್ರೇಕ್ ಹಾಕಿದಾಗ ಒಂದರೆಕ್ಷಣ ಆತಂಕವಾಗಿತ್ತು. ಇನ್ನೊಂದು ರೈಲು ನಮ್ಮ ರೈಲಿಗೆ ಡಿಕ್ಕಿ ಹೊಡೆದಿದೆ ಅನ್ನುವುದನ್ನು ತಿಳಿಯುವುದಕ್ಕೆ ನಮಗೆ ಅರ್ಧ ಗಂಟೆ ಬೇಕಾಯಿತು. ಕೆಳಗಿಳಿದು ನೋಡಿದಾಗ ಹಿಂಬದಿಯ ಎರಡು ಬೋಗಿಗಳು ಪಲ್ಟಿಯಾಗಿದ್ದವು. ಬೆಂಗಳೂರಿನಿಂದ ರೈಲು ಹತ್ತಿದಾಗ ನಮ್ಮ ಬೋಗಿ ಹಿಂಬದಿಯಲ್ಲಿತ್ತು. ಆದರೆ ವಿಶಾಖಪಟ್ಟಣದಲ್ಲಿ ಎಂಜಿನ್ ಅನ್ನು ಹಿಂಬದಿಗೆ ಜೋಡಿಸಿದ್ದರಿಂದ ನಮ್ಮ ಬೋಗಿ ಮುಂಬದಿಗೆ ಬಂದಿದ್ದರಿಂದ ನಾವು ಅಪಾಯದಿಂದ ಪಾರಾದೆವು” ಎಂದು ತಿಳಿಸಿದರು. ಕೋರಮಂಡಲ್ ರೈಲು ನಿಂತಿದ್ದ ಗೂಡ್ಸ್ ರೈಲಿನ ಡಿಕ್ಕಿ ಹೊಡೆದು ಅದರ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಮತ್ತೊಂದು ಟ್ರ್ಯಾಕ್ನ ಮೇಲೆ ಬಿದ್ದಿತ್ತು. ಅದೇ ಸಮಯದಲ್ಲಿ ಬೆಂಗಳೂರಿನಿಂದ ಹೊರಟ್ಟಿದ್ದ ಯಶವಂತಪುರ ಹೌರಾ ಎಕ್ಸ್ಪ್ರೆಸ್ ರೈಲಿನ ಹಿಂಬದಿಯ ೨-೩ ಬೋಗಿಗಳಿಗೆ ಕೋರಮಂಡಲ ಎಕ್ಸ್ಪ್ರೆಸ್ ಗುದ್ದಿದೆ. ಇದರಿಂದ ಯಶವಂತಪುರ ಹೌರಾ ಎಕ್ಸ್ಪ್ರೆಸ್ ರೈಲಿನ ಹಿಂದಿನ ಮೂರು ಬೋಗಿಗಳಲ್ಲಿ ಹೆಚ್ಚು ಸಾವು ನೋವು ಸಂಭವಿಸಿದೆ.