ನ್ಯೂಸ್ ನಾಟೌಟ್: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಮ್ಮುಖದಲ್ಲಿಯೇ ಬಾಗಲಕೋಟೆ ಬಿಜೆಪಿ ಸಭೆಯಲ್ಲಿ ಇಂದು(ಸೋಮವಾರ) ಗಲಾಟೆ ನಡೆದಿದೆ. ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಕಾರ್ಯಕರ್ತರು ತಮ್ಮ ಅಸಮಾಧಾನ ಹೊರಹಾಕಿ ಮಾತಿನ ಚಕಮಕಿ ನಡೆಸಿದರು.
ಬಸವರಾಜ ಬೊಮ್ಮಾಯಿ ಅವರ ಸಮ್ಮಖದಲ್ಲಿಯೇ ನಡೆದ ಸಭೆಯಲ್ಲಿ ಕಾರ್ಯಕರ್ತರ ನಟುವಿನ ಗಲಾಟೆಯಿಂದಾಗಿ ಕೆಲ ಸಮಯ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಸಭೆಯ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿದ ಬಳಿಕ ವೇದಿಕೆ ಮುಂದೆ ಕುಳಿತುಕೊಂಡಿರುವ ರಾಜು ರೇವಣಕರ ಮಾತನಾಡಿ, ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ವಿರೋಧಿ ಚಟುವಟಿಕೆ ಮಾಡಿರುವವರು ಈ ಸಭೆಯಲ್ಲಿ ಆಗಮಿಸಿ ಕುಳಿತುಕೊಂಡಿದ್ದಾರೆ. ಅವರನ್ನು ಸಭೆಯಿಂದ ಹೊರಗೆ ಹಾಕಿರಿ ಎಂದು ಹೇಳಿ, ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರು ಸೇರಿಕೊಂಡು, ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರು ಹೊರಗೆ ಹೋಗಿ, ಇಲ್ಲವೇ ನಾವೇ ಹೂರಗೆ ಹಾಕಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಈ ವೇಳೆ ಮಾಜಿ ಸಚಿವರಾದ ಗೋವಿಂದ ಕಾರಜೋಳ ಅವರು ಸಮಾಧಾನ ಪಡಿಸಿದರು ಆದರೆ, ಕಾರ್ಯಕರ್ತರು ಮತ್ತಷ್ಟು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮಾತನಾಡಿ, ಸಮಾಧಾನ ಪಡಿಸಲು ಮುಂದಾದರು.
ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ.ಶೇಖರ ಮಾನೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ನಿನ್ನೆ ದಿವಸ ಶಿವಾಜಿ ಪುತ್ಥಳಿ ಸ್ಥಾಪನೆ ಮಾಡುವ ವಿಷಯವಾಗಿ ಸಹ ಬಿಜೆಪಿ ಪಕ್ಷದ ವಿರೋಧ ಮಾತನಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಸಭೆಯಿಂದ ಹೂರಗೆ ಹಾಕಿರಿ ಎಂದು ಹೇಳಿದರು. ಇದೇ ವೇಳೆ ಓಲೈಕೆ ರಾಜಕಾರಣದ ಮಾಡುತ್ತಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಅವರ ಬಗ್ಗೆಯೂ ಅಸಮಾಧಾನ ಎದ್ದದ್ದು ಕಂಡುಬಂತು.
ಈ ಸಂದರ್ಭದಲ್ಲಿ ಡಾ.ಮಾನೆ ವೇದಿಕೆಗೆ ಆಗಮಿಸಿ, ಮುಖಂಡರಿಗೆ ಸಮಜಾಯಿಷಿ ಹೇಳಲು ಮುಂದಾದಾಗ ಕಾರ್ಯಕರ್ತರು ಹಾಗೂ ಪೊಲೀಸರು ಆಗಮಿಸಿ, ಡಾ.ಮಾನೆಯನ್ನು ಹೊರಗೆ ಕರೆದುಕೊಂಡು ಹೋದರು. ಇವರ ಜೊತೆಗೆ ಅವರ ಬೆಂಬಲಿಗರನ್ನು ಸಹ ಕರೆದುಕೊಂಡು ಹೋದರು. ನಂತರ ಸಭೆಯು ಮುಂದುವರೆಯಿತು ಎಂದು ವರದಿ ತಿಳಿಸಿದೆ.