ನ್ಯೂಸ್ ನಾಟೌಟ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ಸ್ವಸ್ಥವೃತ್ತ ವಿಭಾಗದ ವತಿಯಿಂದ ಸುಳ್ಯದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಆಯುಷ್ ಮಂತ್ರಾಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಇದರ ನಿರ್ದೇಶನದನುಸಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೆವಿಜಿ ಆಯುರ್ವೇದ ಕಾಲೇಜಿನಿಂದ ಆರಂಭವಾದ ಜಾಥಾ ವಿವೇಕಾನಂದ ವೃತ್ತ, ಶ್ರೀರಾಂಪೇಟೆ ಮೂಲಕ ಸಾಗಿ ಬಂದು ಸುಳ್ಯದ ಮುಖ್ಯ ರಸ್ತೆಯಲ್ಲಿ ದಾಟಿ ಕಟ್ಟೆಕಾರ್ ಮೂಲಕ ಚೆನ್ನಕೇಶವ ದೇವಸ್ಥಾನ ರಸ್ತೆಯಲ್ಲಿ ಸಾಗಿ ಕೆವಿಜಿ ಆಯುರ್ವೇದ ಕಾಲೇಜಿನವರೆಗೆ ನಡೆಯಿತು. ಜಾಥಾದಲ್ಲಿ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ರಾಷ್ಟ್ರೀಯ ಸೇವಾ ಯೋಜನೆ ಘಟಕಾಧಿಕಾರಿ ಡಾ. ಪ್ರಮೋದ್ ಪಿ.ಎ. ಹಾಗೂ ಸಂಸ್ಥೆಯ 95 ಎನ್ನೆಸ್ಸೆಸ್ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.