ನ್ಯೂಸ್ ನಾಟೌಟ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಸಿ.ಎಂ.ಸಿದ್ದು ಹಾಗೂ ಕೆಂದ್ರ ಸಚಿವ ಅಮಿತ್ ಶಾ ಅವರು ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಿದ್ದು, ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ಸಂಬಂಧ ಇವರಿಬ್ಬರ ನಡುವೆ ಸುದೀರ್ಘ ಮಾತುಕತೆ ನಡೆಯಿತು.ಕೇಂದ್ರ ಸರ್ಕಾರದ ನೀತಿಯಿಂದ ಬಡವರಿಗೆ ಆಹಾರ ನೀಡುವ ಯೋಜನೆಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಮುಖ್ಯಮಂತ್ರಿ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರ ಜತೆ ಗುರುವಾರ ಮಾತುಕತೆ ನಡೆಸುವುದಾಗಿ ಅಮಿತ್ ಶಾ ಅವರು ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಚುನಾವಣೆ ಸಂದರ್ಭ ರಾಜ್ಯ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಮತದಾರರಿಗೆ ನೀಡಿತ್ತು.ಕಾಂಗ್ರೆಸ್ ಬಹುಮತಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.ಇದೀಗ ಅವುಗಳಲ್ಲಿ ಮಹಿಳೆಯರಿಗೆ ಫ್ರೀ ಬಸ್ ಯೋಜನೆಗೆ ಚಾಲನೆ ನೀಡಲಾಗಿದೆ.ಗ್ಯಾರಂಟಿಗಳಲ್ಲಿ ಬಿಪಿಎಲ್ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯೂ ಒಂದಾಗಿದ್ದು, ಇದನ್ನೂ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನದಲ್ಲಿದೆ.
ಈ ಕುರಿತು ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಎಂ ಸಿದ್ದರಾಮಯ್ಯ ಅವರು ಅಕ್ಕಿ ವಿತರಣೆ ಬಗ್ಗೆ ರಾಜಕೀಯ ಅಥವಾ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ. ಬುಧವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿದ್ದೇನೆ. ಅಮಿತ್ ಶಾ ಅವರು ಸಂಬಂಧಪಟ್ಟ ಮಂತ್ರಿಗಳಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.