ನ್ಯೂಸ್ ನಾಟೌಟ್: ಅಲ್ಲಾ, ಕುರಾನ್ ಮೇಲೆ ಪ್ರಮಾಣ ಮಾಡಿ ಮುಸ್ಲಿಮರು ಮೋಸ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಹೊಸಕೋಟೆಯಲ್ಲಿ ಶುಕ್ರವಾರ ತಾಲೂಕು ಮುಸ್ಲಿಂ ಫೋರಂ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಹಣ, ಉಡುಗೊರೆ ಪಡೆದು ಮತ ಹಾಕುವುದಾಗಿ ಅಲ್ಲಾ, ಕುರಾನ್ ಮೇಲೆ ಪ್ರಮಾಣ ಮಾಡಿದ ಮುಸ್ಲಿಮರು ಮತ ಹಾಕದೆ ಮೋಸ ಮಾಡಿದ್ದಾರೆ ಎಂದು ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಆರೋಪಿಸಿದ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದರು. ಸಮುದಾಯದ ಮುಖಂಡ ಡಾ.ಸೈಯದ್ ಮುಜಮಿಲ್ ಮಾತನಾಡಿ, ಎಂಟಿಬಿ ಹೇಳಿಕೆ ಇಡೀ ಮುಸ್ಲಿಂ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು, ಬಹಿರಂಗವಾಗಿ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ವಕ್ತಾರ ಗಪಾರ್ ಬೇಗ್ ಮಾತನಾಡಿ, ಮತ ಹಾಕಲು ಹಣ ಪಡೆದ ಮುಸ್ಲಿಂ ಜನಾಂಗ ಶೇ. 10ರಷ್ಟು ಮಾತ್ರ ಮತ ನೀಡಿದ್ದಾರೆಂದು ಎಂಟಿಬಿ ಬಹಿರಂಗ ಸಭೆಯಲ್ಲಿ ಹೇಳಿ, ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಇದರ ಜತೆ ನಮ್ಮ ಧರ್ಮ ಗ್ರಂಥ, ಆಜಾನ್ ಹಾಗೂ ಇಡೀ ಜನಾಂಗದ ಬಗ್ಗೆ ಮಾತನಾಡುವ ಮೂಲಕ ನಮ್ಮನ್ನು ಅವಮಾನಿಸಿದ್ದಾರೆ. ಕ್ಷಮೆ ಕೇಳದೆ ಹೋದಲ್ಲಿ ಮುಂದಿನ ಚುನಾವಣೆಗಳಲ್ಲೂ ನಿಮ್ಮನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.