ನ್ಯೂಸ್ ನಾಟೌಟ್ : ಮದ್ಯದ ದರ ಹೆಚ್ಚಳ ಪ್ರಸ್ತಾವಕ್ಕೆ ರಾಜ್ಯ ಮದ್ಯಪ್ರೇಮಿಗಳ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಇವರಿಗೆ ಇಮೇಲ್ ಮಾಡುವ ಮೂಲಕ ಅಸಮಾಧಾನ ತೋಡಿಕೊಂಡಿದೆ. ಸರ್ಕಾರದ ಶುಲ್ಕ ನಿಯಂತ್ರಣ ಸಮಿತಿ ಹಾಗೂ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ಇ-ಮೇಲ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ ಜಾತಿ, ಧರ್ಮ, ಬಡವ, ಬಲ್ಲಿದ ಎಂಬ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಮದ್ಯಪ್ರಿಯರು ಆಹಾರ ಸಂಸ್ಕೃತಿಯ ಭಾಗವಾಗಿ ಮದ್ಯ ಸೇವನೆ ಮಾಡುತ್ತಾರೆ. ಮದುವೆ, ಹಬ್ಬ ಹರಿದಿನ, ಆರಾಧನೆ ಹಾಗೂ ಸಂತೋಷ ಕೂಟಗಳಲ್ಲಿ ಮದ್ಯ ಸೇವಿಸುತ್ತಾರೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಅಷ್ಟೂ ಆದಾಯವನ್ನು ವಿನಿಯೋಗಿಸುವ ಸರ್ಕಾರ, ಮದ್ಯಪ್ರೇಮಿಗಳ ಕುರಿತು ಕಾಳಜಿ ವಹಿಸದಿರುವುದು ದುಃಖಕರ’ ಎಂದು ಸಂಘವು ಹೇಳಿದೆ.
‘ಬಿಪಿಎಲ್ ಕಾರ್ಡು ಹೊಂದಿದ ಕಡಿಮೆ ಆದಾಯ ವರ್ಗದ ಮದ್ಯಪ್ರಿಯ ದಿನಗೂಲಿ ನೌಕರ ದಿನವೊಂದಕ್ಕೆ ಸರಾಸರಿ 180 ಮಿ.ಲೀ. ಮದ್ಯ ಕುಡಿದರೂ, ಆತನಿಗೆ ನಿತ್ಯ ₹ 200 ರಿಂದ ₹ 250 ಮದ್ಯಕ್ಕೆ ಖರ್ಚಾಗುತ್ತದೆ. ಇದರಿಂದ ತಿಂಗಳಿಗೆ ₹7500, ವರ್ಷಕ್ಕೆ ₹ 90,000 ವೆಚ್ಚವಾಗುತ್ತದೆ. ಇದರಿಂದ ಮಧ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ’ ಎಂದೂ ಸಂಘವು ತಿಳಿಸಿದೆ ಎನ್ನಲಾಗಿದೆ.
‘ಮದ್ಯದ ಮೇಲಿನ ಸುಂಕ ಹೆಚ್ಚಳ ಪ್ರಸ್ತಾವವನ್ನು ಪುನರ್ ಪರಿಶೀಲನೆ ಮಾಡಬೇಕು. ಸ್ಥಳೀಯ ಬ್ರ್ಯಾಂಡ್, ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯ ಹಾಗೂ ಬಿಯರ್ ಮೇಲಿನ ಸುಂಕ ಕಡಿಮೆ ಮಾಡಬೇಕು ಎಂದು ರಾಜ್ಯದ ಮದ್ಯಪ್ರಿಯರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ’ ಎಂದು ಮದ್ಯಪ್ರೇಮಿಗಳ ಸಂಘ ಹೇಳಿಕೊಂಡಿದೆ.
- +91 73497 60202
- [email protected]
- November 23, 2024 2:07 AM