ನ್ಯೂಸ್ ನಾಟೌಟ್ : ಪ್ರೀತಿಗಾಗಿ ಜಗತ್ತಿನಲ್ಲಿ ಏನೆಲ್ಲ ನಡೆದು ಹೋಗಿದೆ. ಇಲ್ಲೊಬ್ಬ ಮುಸ್ಲಿಂ ಯುವಕ ಪ್ರೀತಿಸಿದ ಹುಡುಗಿಗಾಗಿ ತನ್ನ ಧರ್ಮವನ್ನೇ ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಿ ಭಾರಿ ಸುದ್ದಿಯಾಗಿದ್ದಾನೆ. ಈ ಘಟನೆ ಮಧ್ಯಪ್ರದೇಶದ ನರಸಿಂಗ್ಪುರ ಎಂಬಲ್ಲಿ ನಡೆದಿದೆ. ಫಾಜಿಲ್ ಖಾನ್ ಎಂಬ ಯುವಕ ಹಾಗೂ ಆತನ ಗೆಳತಿ ಸೋನಾಲಿ ಬಹುವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಕಳೆದೆರಡು ದಿನಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದು, ಆತ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಜತೆಗೆ ತನ್ನ ಹೆಸರನ್ನು ಅಮನ್ ರೈ ಎಂದು ಬದಲಿಸಿಕೊಂಡಿದ್ದಾನೆ ಎನ್ನಲಾಗಿದೆ. ಮದುವೆಗೆ ಗಂಡು ಹೆಣ್ಣು ಎರಡು ಮನೆಯವರು ಸಾಕ್ಷಿಯಾಗಿದ್ದು,ಕರೇಲಿರಾಮ್ ದೇವಾಲಯದಲ್ಲಿ ಸೋನಾಲಿ ಹಾಗೂ ಅಮನ್ ರೈ ವಿವಾಹವು ನೆರವೇರಿತು.ವಿಶೇಷವೆಂದರೆ ಅಮನ್ ತಂದೆ ಮೊದಲು ಹಿಂದೂವಾಗಿದ್ದರು. ಆದರೆ ಅವನ ತಾಯಿ ಮುಸ್ಲಿಂ ಆಗಿದ್ರು ಎಂಬ ಮಾಹಿತಿಯಿದೆ. ಹಲವು ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ತೊಡೆದು ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಿದ್ದರು.ಇದೀಗ ಇವರ ಮಗ ಮದುವೆಯಾಗಿದ್ದು, ವಿವಾಹ ನೋಂದಣಿಗಾಗಿ ಈ ದಂಪತಿ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಮನ್, ನನ್ನ ತಂದೆ ನನ್ನ ತಾಯಿಗಾಗಿ ಧರ್ಮವನ್ನು ಬದಲಾಯಿಸಿದ್ದರು. ನಾನು ನನ್ನ ಹೆಂಡತಿಗಾಗಿ ನನ್ನ ಧರ್ಮವನ್ನು ಬದಲಾಯಿಸಿದ್ದೇನೆ ಎಂದು ಮುಗುಳ್ನಕ್ಕು ಹೇಳಿದ್ದಾರೆ.