ನ್ಯೂಸ್ ನಾಟೌಟ್: ಒಡಿಶಾದಲ್ಲಿ ಸಂಭವಿಸಿದ ಮೂರು ರೈಲುಗಳ ನಡುವಿನ ಭೀಕರ ದುರಂತದಲ್ಲಿ ಸಾವಿಗೀಡಾಗುತ್ತಿರುವ ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಸದ್ಯ 290 ಅಧಿಕ ಮಂದಿ ಸಾವಿಗೀಡಾಗಿದ್ದು 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ನೋವಿನ ನಡುವೆಯೇ ಅಪಘಾತಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ತನಿಖೆ ನಡೆಯುತ್ತಿದ್ದು ಓರ್ವ ಮಾಡಿದ ತಪ್ಪಿಗೆ ಇಷ್ಟು ದೊಡ್ಡ ದುರಂತ ಸಂಭವಿಸಿ ಬಿಟ್ಟಿದೆ ಅನ್ನುವುದು ಪ್ರಾಥಮಿಕ ತನಿಖೆಯಿಂದ ವರದಿಯಾಗಿದೆ.
ಹೌದು, ಅವಘಡ ನಡೆದ ಜಾಗದಲ್ಲಿ ನಾಲ್ಕು ರೈಲ್ವೆ ಹಳಿಗಳು ಇದ್ದವು. ಮೊದಲನೆಯ ಹಳಿ ಮೈನ್ಲೈನ್, ಎರಡನೇ ಹಳಿ ಮೈನ್ಲೈನ್. ಈ ಎರಡೂ ಹಳಿಗಳಲ್ಲಿ ಪ್ರಯಾಣಿಕರ ರೈಲು ಹಾದು ಹೋಗುತ್ತದೆ. ಮತ್ತೆರಡು ಹಳಿಯನ್ನು ಲೂಪ್ ಲೈನ್ ಎಂದು ಕರೆಯಲಾಗುತ್ತದೆ. ಈ ಹಳಿಯು ಗೂಡ್ಸ್ ರೈಲು ನಿಂತುಕೊಳ್ಳಲೆಂದು ಮಾಡಲಾಗಿರುತ್ತದೆ. ಈ ಹಳಿಯ ಮೇಲೆ ಗೂಡ್ಸ್ ರೈಲೊಂದು ನಿಂತುಕೊಂಡಿತ್ತು. ಈ ರೈಲಿನ ಪೂರ್ಣ ಭೋಗಿಗಳು ಮೈನ್ಲೈನ್ನಿಂದ ಕ್ಲೀಯರ್ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಹಾಯಕ ಸ್ಟೇಷನ್ ಮಾಸ್ಟರ್ ಸಿಗ್ನಲ್ ಅನ್ನು ಆಫ್ ಮಾಡುತ್ತಾನೆ. ಇದರಿಂದಾಗಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಪಶ್ಚಿಮಬಂಗಾಳದಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಮುಖ್ಯ ಲೈನ್ನಲ್ಲಿ ಏನೋ ಸಮಸ್ಯೆ ಆಗಿದೆಯೆಂದು ಭಾವಿಸಿ ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್ ಕಡೆಗೆ ತಿರುಗುತ್ತದೆ. ಇದರಿಂದಾಗಿ ನೇರವಾಗಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯುತ್ತದೆ. ಇದೇ ಸಮಯದಲ್ಲಿ ಮತ್ತೊಂದು ಮೈನ್ ಟ್ರ್ಯಾಕ್ನಲ್ಲಿ ಬೆಂಗಳೂರಿನಿಂದ ಪಶ್ಚಿಮ ಬಂಗಾಳದತ್ತ ಹೊರಟಿದ್ದ ಯಶವಂತಪುರ ಹೌರಾ ಎಕ್ಸ್ಪ್ರೆಸ್ ರೈಲು ಗಂಟೆಗೆ 170 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ಅದು ಇನ್ನೇನು ಪಾಸಾಗಬೇಕು ಅನ್ನುವಷ್ಟರಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಟ್ರ್ಯಾಕ್ ತಪ್ಪಿ ಯಶವಂತಪುರ ಹೌರಾ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದ್ದ ಟ್ರ್ಯಾಕ್ ಗೆ ಬಂದು ಬೀಳುತ್ತವೆ. ಇದರಿಂದಾಗಿ ಯಶವಂತಪುರ ಹೌರಾ ಎಕ್ಸ್ಪ್ರೆಸ್ ರೈಲಿನ ಹಿಂದಿನ ನಾಲ್ಕು ಬೋಗಿಗಳು ನಜ್ಜುಗುಜ್ಜಾಗುತ್ತವೆ. ಹೀಗಾಗಿ ಸಾವಿನ ಪ್ರಮಾಣ ಹೆಚ್ಚಾಗಿದೆ ಅನ್ನುವುದು ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಸಹಾಯಕ ಸ್ಟೇಷನ್ ಮಾಸ್ಟರ್ ಸ್ವಲ್ಪ ಎಚ್ಚೆತ್ತುಕೊಂಡಿದ್ದರೆ ಸಂಭವಿಸಬಹುದಾಗಿದ್ದ ಭಾರಿ ದುರಂತವನ್ನು ತಪ್ಪಿಸಬಹುದಾಗಿತ್ತು.