ನ್ಯೂಸ್ ನಾಟೌಟ್ : ನಮಸ್ಕಾರ ದೇವ್ರು ಅಂತ ಹೇಳಿ ಇಡೀ ಕರ್ನಾಟಕದ ಜನರನ್ನು ಮೋಡಿ ಮಾಡಿದ ಹುಡುಗ ಎಲ್ಲರಿಗೂ ಚಿರಪರಿಚಿತ.ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವೆಗೆ ಈತನ ಡಾ.ಬ್ರೋ ಯೂಟ್ಯೂಬ್ ಚಾನೆಲ್ ಗೆ ಹೋಗಿ ವಿಡಿಯೋ ನೋಡಿ ಶಹಬ್ಬಾಸ್ ಎಂದಿದ್ದಾರೆ.ಲಕ್ಷಾಂತರ ವೀಕ್ಷಕರನ್ನು ಹೊಂದಿರುವ ಈತನ ವಿಡಿಯೋವನ್ನು ನೋಡಲು ದಿನಾ ಜನ ಕಾಯುತ್ತಿರುತ್ತಾರೆ.ಇಡೀ ವಿಶ್ವವನ್ನೆ ಸುತ್ತಿ ವಿಶ್ವದಲ್ಲಿನ ವಿಶೇಷತೆಗಳನ್ನು ಕರ್ನಾಟಕದ ಜನರಿಗೆ ತಿಳಿಸುವ ಓರ್ವ ಪ್ರತಿಭಾನ್ವಿತ ಯೂಟ್ಯೂಬರ್ ! ಆದರೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಡಾ. ಬ್ರೋ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರಂತೆ!
ಹೌದು, ಯೂಟ್ಯೂಬ್ ನಲ್ಲಿ ಹವಾ ಕ್ರೀಯೆಟ್ ಮಾಡಿದ ಇವರು ನಾಡಿನಾದ್ಯಂತ ಕೊಟ್ಯಂತರ ಅಭಿಮಾನಿಗಳ ಗಮನ ಸೆಳೆದ ಯೂಟ್ಯೂಬರ್ ! ತಮ್ಮ ವಿಡಿಯೋ ಮೂಲಕವೇ ಮನರಂಜನೆ ನೀಡುತ್ತಾ ನೋಡಗರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಬಲ್ಲರು..ಇದೀಗ ಇವರಿಗೆ ಸಿನಿಮಾದಲ್ಲಿಯೂ ಅವಕಾಶಗಳು ಹರಿದು ಬರುತ್ತಿವೆಯಂತೆ. ಹಾಗಿದ್ರೆ ಯಾವುದು ಆ ಸಿನೆಮಾ ಗೊತ್ತಾ?
ಡಾ. ಬ್ರೋ ಇದೀಗ ಸದ್ದಿಲ್ಲದೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಯಸ್, ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನಾಧರಿಸಿದ ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ಡಾ. ಬ್ರೋ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ. ಈಗಾಗಲೇ ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಆ ಟ್ರೇಲರ್ಗೆ ಡಾ. ಬ್ರೋ ಧ್ವನಿ ನೀಡಿದ್ದಾರೆ. 3 ನಿಮಿಷದ ಟ್ರೇಲರ್ನಲ್ಲಿ ಆರಂಭದಿಂದ ಕೊನೇ ವರೆಗೂ ಡಾ. ಬ್ರೋ ತಮ್ಮದೇ ಶೈಲಿಯಲ್ಲಿ ಅಬಚೂರಿನ ಕಹಾನಿಯನ್ನು ಹೇಳುತ್ತ ಹೋಗಿದ್ದಾರೆ. ಸಿನಿಮಾ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಡೇರ್ ಡೇವಿಲ್ ಮುಸ್ತಾಫಾ ಕಥೆಯನ್ನಾಧರಿಸಿದ ಈ ಸಿನಿಮಾ ಶಶಾಂಕ್ ಸೊಗಲ ನಿರ್ದೇಶನದಲ್ಲಿ ಮೂಡಿಬರಲಿದೆ. ಮೇ 19ರಂದು ಸಿನಿಮಾ ರಿಲೀಸ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಾ.ಬ್ರೋ ಯಾರು ಗೊತ್ತೆ?
ಹೆಸರು ಗಗನ್.ಪ್ರಾಯ ಅಂದಾಜು ೨೩. ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವನು. ಈತ ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ.ಅಷ್ಟೇನೂ ಶ್ರೀಮಂತರಲ್ಲ,ಮಧ್ಯಮ ಕುಟುಂಬ. ಈತನ ತಂದೆಯ ಹೆಸರು ಶ್ರೀನಿವಾಸ್. ದೇವಸ್ಥಾನದಲ್ಲಿ ಅರ್ಚಕರು.ತಾಯಿಯ ಹೆಸರು ಪದ್ಮಾ ಹೌಸ್ ವೈಫ್.ಗಗನ್ ಎರಡನೆ ತರಗತಿಯಲ್ಲಿಯೇ ಪೌರೋಹಿತ್ಯ ಕಲಿತಿದ್ದು, ದೇವಸ್ಥಾನದ ಪೂಜೆಯನ್ನೂ ಮಾಡುತ್ತಿದ್ದ. 2016 ರಲ್ಲಿ ಯೂಟ್ಯೂಬ್ ಚಾನೆಲ್ ಮಾಡುವ ಕನಸು ಕಂಡ. ಜನರಿಗೆ ಡಿಫರೆಂಟಾಗಿ ಮನರಂಜನೆ ನೀಡಬೇಕೆಂದು ಉದ್ದೇಶಿಸಿ ಡಾ.ಬ್ರೋ ಹೆಸರನ್ನಿಟ್ಟು ಕಾಮಿಡಿ ವಿಡಿಯೋ ಅಪ್ ಲೋಡ್ ಮಾಡಲು ಶುರು ಮಾಡಿದ.ನೋಡ ನೋಡುತ್ತಿದ್ದಂತಲೇ ಈತನಿಗೆ ಫಾಲವರ್ಸ್ ಹೆಚ್ಚಾಗುತ್ತಾ ಹೋಯಿತು.ಒಂದು ದಿನ ಡಾ.ಬ್ರೋ ಜನರಿಗೆ ಪ್ರಾಮಿಸ್ ಮಾಡುತ್ತಾನೆ.ನಿಮಗೆ ನಾನು ಇಡೀ ಪ್ರಪಂಚವನ್ನು ತೋರಿಸುತ್ತೇನೆ.ನೀವು ಕುಳಿತಲ್ಲಿಯೇ ಇಡೀ ಪ್ರಪಂಚವನ್ನು ನೋಡಿ ನನ್ನನ್ನು ಹರಸಿ ಎಂದಿದ್ದ.ಕಡೆಗೂ ಆ ಮಾತನ್ನು ನೆರವೇರಿಸಿದ.ಡಾ.ಬ್ರೋ ಕನ್ನಡಿಗರ ಮನೆಮಾತಾದ ಹುಡುಗನಾಗಿ ಬೆಳೆದ.