ನ್ಯೂಸ್ ನಾಟೌಟ್: ಕಾಂಗ್ರೆಸ್ ಅವಧಿಯಲ್ಲಿ ಕರ್ನಾಟಕ ಪಿಎಫ್ಐ ಮತ್ತು ಐಎಸ್ಐ ಸಂಘಟನೆಗಳ ಸ್ಲೀಪರ್ ಸೆಲ್ ಆಗಿತ್ತು. ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಅದಕ್ಕೆ ಕಡಿವಾಣ ಬಿದ್ದಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಬಿ.ಸಿ.ರೋಡ್ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ ಬಸ್ ನಿಲ್ದಾಣದವರೆಗೆ ನಡೆದ ರ್ಯಾಲಿ ಬಳಿಕ ಮಾತನಾಡಿದರು.
ಪ್ರಭು ಶ್ರೀರಾಮನ ಊರಿನಿಂದ ನಾನು ಬಂದಿದ್ದೇನೆ. ಕರ್ನಾಟಕಕ್ಕೂ ಅಯೋಧ್ಯೆಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮನ ಬಂಟ ಹನುಮನ ನಾಡು ಕರ್ನಾಟಕ. ಶ್ರೀರಾಮನ ವನವಾಸ ಸಂದರ್ಭ ಹನುಮಂತ ನೀಡಿದ ಶ್ರೇಷ್ಠ ಸಾಹಸದ ಸೇವೆ ಮನುಕುಲಕ್ಕೆ ಆದರ್ಶಪ್ರಾಯವಾಗಿದೆ. ಹನುಮನ ಸೇವಾಗುಣ, ಆದರ್ಶ, ಶ್ರೇಷ್ಠತೆ, ರಾಷ್ಟ್ರಭಕ್ತಿ, ರಾಜಭಕ್ತಿ ಹೊಂದಿರುವ ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ನ ಹುನ್ನಾರ ಎಂದಿಗೂ ಕೈಗೂಡದು ಎಂದು ಯೋಗಿ ಗುಡುಗಿದರು.
ಅಲ್ಲದೆ ಹನುಮನ ಆದರ್ಶ ಪಾಲನೆ, ಸಂಘಟನೆ ಶಕ್ತಿಯೊಂದಿಗೆ ಅಭಿವೃದ್ಧಿ, ಮತ್ತು ರಾಷ್ಟ್ರಹಿತಕ್ಕೆ ಆದ್ಯತೆ ನೀಡುವ ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ಅವರನ್ನು ಬಹುಮತದೊಂದಿಗೆ ಆಯ್ಕೆ ಮಾಡುವ ಮೂಲಕ ನಾಡು ನಿರ್ಮಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಯೋಗಿ ಮನವಿ ಮಾಡಿದರು. ಅಲ್ಲದೆ ಜೈ ಬಜರಂಗ್ ಬಲಿ, ಜೈ ಶ್ರೀರಾಮ್ ಘೋಷಣೆ ಹಾಕಿಸಿದರು. ಈ ವೇಳೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಕಾರ್ಯಕರ್ತರ ಜೈಕಾರ ಮುಗಿಲು ಮುಟ್ಟಿತ್ತು.
ದೇವರ ನೆನೆದ ಯೋಗಿ: ಮೊದಲಿಗೆ ಬಂಟ್ವಾಳ ವೆಂಕಟರಮಣ ಸ್ವಾಮಿ, ಪೊಳಲಿ ರಾಜರಾಜೇಶ್ವರಿ, ಕಟೀಲು ದೇವಿಯನ್ನು ನೆನೆದು ಪರಶುರಾಮನ ಸೃಷ್ಟಿಯ ತುಳುನಾಡಿಗೆ ನಮಿಸಿ ಮಾತು ಆರಂಭಿಸಿದರು.
ಭಾಷಣ ನಡುವೆ ಶ್ರೀರಾಮ ಮಂದಿರ ವಿಚಾರ ಪ್ರಸ್ತಾಪಿಸಿದ ಯೋಗಿ 2024ರ ಜನವರಿಯಲ್ಲಿ ಪ್ರಭು ಶ್ರೀರಾಮಚಂದ್ರ ಭವ್ಯ ಮಂದಿರ ನಿರ್ಮಾಣಗೊಳ್ಳಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಬಂಟ್ವಾಳದ ಕಾರ್ಯಕರ್ತರು ಬರಬೇಕು. ನಿಮಗೆ ಈಗಲೇ ಆಹ್ವಾನ ನೀಡುತ್ತಿದ್ದೇನೆ ಎಂದರು. ಆಗ ಕಾರ್ಯಕರ್ತರ ಹರ್ಷೋದ್ಘಾರ ಜೋರಾಗಿತ್ತು.