ನ್ಯೂಸ್ ನಾಟೌಟ್ : 25 ವರ್ಷದ ಯುವಕನ್ನು ಮದ್ಯಪಾನಮತ್ತ ಮಹಿಳೆಯೊಬ್ಬಳು ಬರ್ಬರವಾಗಿ ಕೊಂದಿರುವ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಂಗಳವಾರ ನಡೆದಿದೆ. ಹತ್ಯೆಗೊಳಗಾದ ಯುವಕನನ್ನು ನಾಗರಾಜ್ ರಾಗಿ ಪಾಟೀಲ್(25) ಮೂಲತಃ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಕೆಲಸ ಹುಡುಕಿ ಮಹಾರಾಷ್ಟ್ರದ ಕರಾಡ್ಗೆ ತೆರಳಿದ್ದ ಆತ ಕೊಲೆಯಾದ ಮೊದಲ ದಿನ ಸ್ವಗ್ರಾಮ ತಾರಿಹಾಳಕ್ಕೆ ಬಂದಿದ್ದ ಎನ್ನಲಾಗಿದೆ. ಊರಿನಲ್ಲಿ ಜಾತ್ರೆಯಿರುವ ಕಾರಣ, ಹೊಸ ಬಟ್ಟೆ ಖರೀದಿಗಾಗಿ ಸ್ನೇಹಿತನ ಜೊತೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ. ಈ ವೇಳೆ ಮದ್ಯವ್ಯಸನಿ ಮಹಿಳೆಯೋರ್ವಳು ಎದುರಾಗಿದ್ದಾಳೆ. ಬೆಳಗಾವಿಯ ಕಂಗ್ರಾಳಿ ಕೆ.ಹೆಚ್.ಗ್ರಾಮದ ನಿವಾಸಿಯಾಗಿರುವ ಅಂದಾಜು 40 ವರ್ಷದ ಜಯಶ್ರೀ ಪವಾರ್ ಎಂಬುವವರು ನಾಗರಾಜ್ ಬಳಿ ಬಂದು ಮೊಬೈಲ್ ನೀಡುವಂತೆ ಕೇಳಿದ್ದಾಳಂತೆ.
ಆಗ ಗಾಬರಿಗೊಂಡ ನಾಗರಾಜ್ ಯಾವ ಮೊಬೈಲ್ ಎಂದು ಪ್ರಶ್ನೆ ಮಾಡಿದ್ದಾನೆ. ಅಷ್ಟೇ ಕೈಯಲ್ಲಿದ್ದ ಚಾಕುವಿನಿಂದ ನಾಗರಾಜ್ನ ಎದೆಗೆ ಚುಚ್ಚಿದ್ದಾಳೆ. ಈ ವೇಳೆ ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ನಾಗರಾಜ್ನನ್ನು ಸ್ನೇಹಿತರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಾಗರಾಜ್ ರಾಗಿ ಪಾಟೀಲ್ ಮೃತಪಟ್ಟಿದ್ದಾರೆ.
ಇನ್ನು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮಹಿಳೆ ಜಯಶ್ರೀ ಪವಾರ್ರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ಜಯಶ್ರೀ ಪವಾರ್ ಮದ್ಯವ್ಯಸನಿಯಾಗಿ ಈ ರಿತಿಯ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಹಲವು ಬಾರಿ ಈ ರೀತಿ ಸಾರ್ವಜನಿಕರ ಜೊತೆ ಕಿರಿಕ್ ಸಹ ಮಾಡಿದ್ದಳಂತೆ. ಇನ್ನು ಮರಣೋತ್ತರ ಪರೀಕ್ಷೆ ಬಳಿಕ ನಾಗರಾಜ್ ಮೃತದೇಹವನ್ನು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮಕ್ಕೆ ಸ್ಥಳಾಂತರಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಹಿಳೆಯನ್ನು ಹೆಚ್ಚಿನ ವಿಚಾರಣೆಗೆ ಕೋರ್ಟ್ ಅನುಮತಿ ಪಡೆದು ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.