ನ್ಯೂಸ್ ನಾಟೌಟ್: ಮತದಾನ ನಮ್ಮೆಲ್ಲರ ಹಕ್ಕು, ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೊಂದೇ ವ್ಯವಸ್ಥೆಯ ಬದಲಾವಣೆಗೆ ಬಲಿಷ್ಠ ಅಸ್ತ್ರ. ಈ ಹಿಂದೆ ಚುನಾವಣೆಯಲ್ಲಿ ಕಾಗದ ಬಳಸಿ ಮತದಾನ ಮಾಡಲಾಗುತ್ತಿತ್ತು. ಇದೀಗ ಮತದಾನಕ್ಕೆ ಇವಿಎಂ ಮೆಷಿನ್ ಗಳು ಬಂದಿದ್ದು ಸಾಕಷ್ಟು ಬದಲಾವಣೆಯಾಗಿದೆ. ಓಟು ಹಾಕುವುದರ ಜತೆಗೆ ನೋಟಾ ಆಯ್ಕೆಯನ್ನು ನೀಡಲಾಗಿದೆ. ಈ ಕುರಿತು ಜನರಿಗೆ ಒಂದಷ್ಟು ಗೊಂದಲವಿದ್ದು ನೋಟಾ ಅಂದ್ರೆ ಏನು ಅನ್ನುವುದನ್ನು ತಿಳಿಯುವುದರ ಅಗತ್ಯವಿದೆ.
ಏನಿದು ನೋಟಾ? ಏಕೆ ಮುಖ್ಯ?
ಒಂದು ದೇಶದಲ್ಲಿ ಚುನಾವಣೆ ಹೇಗೆ ಮುಖ್ಯವೋ ಹಾಗೆ ನೋಟಾ ಹಕ್ಕು ಅಷ್ಟೇ ಮುಖ್ಯ. ಏಕೆಂದರೆ ಸೂಕ್ತ ಅಭ್ಯರ್ಥಿಗಳಿಲ್ಲವೆಂದು ಮತದಾನ ಮಾಡದೇ ಇರುವುದರಿಂದ ಜನಾಭಿಪ್ರಾಯ ತಿಳಿಯುವುದಿಲ್ಲ. ಆದರೆ ನೀವು ನೋಟಾ ಆಯ್ಕೆಯನ್ನು ಒತ್ತವ ಮೂಲಕ ನಿಮ್ಮ ಕ್ಷೇತ್ರದ ಅಭ್ಯರ್ಥಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಬಹುದು. ಈ ಮೂಲಕ ಹೊಸ ರಾಜಕೀಯ ಬೆಳವಣಿಗೆಗೆ ಅಡಿಪಾಯ ಹಾಕಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನು ಅಭ್ಯರ್ಥಿ ತಿರಸ್ಕಾರಗೊಳ್ಳುವ ಮೂಲಕ ಪ್ರಜೆಗಳೇ ಪ್ರಭುಗಳು ಎಂಬ ಸಿದ್ಧಾಂತವನ್ನು ಸಾರಿ ಹೇಳಬಹುದು.
ನೋಟಾಕ್ಕಾಗಿ ಸುಪ್ರೀಂನಲ್ಲಿ ಅರ್ಜಿ
2009 ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಇಂತಹದೊಂದು ಪ್ರಸ್ತಾವನೆಯನ್ನು ಸಲ್ಲಿಸಿತು. ಆದರೆ ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ ‘ಪೀಪಲ್ ಯೂನಿಯನ್ ಫರ್ ಸಿವಿಕ್ ಲಿಬರ್ಟೀಸ್’ ಎಂಬ ಸಂಸ್ಥೆ ನೋಟಾ ಜಾರಿಗೆ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. ಈ ಅರ್ಜಿಯನ್ನು ಬೆಂಬಲಿಸಿ 2013 ಸೆಪ್ಟಂಬರ್ 27 ರಂದು ಸುಪ್ರೀಂಕೋರ್ಟ್ ನೋಟಾ ಆಯ್ಕೆಯನ್ನು ಮತಪತ್ರ, ಮತಯಂತ್ರದಲ್ಲಿ ಅಳವಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಅಲ್ಲದೆ ಇದರಿಂದ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದೆಂದು ಸುಪ್ರೀಂ ಕೋರ್ಟ್ ಪರೋಕ್ಷ ಸೂಚನೆ ನೀಡಿತ್ತು.ಈ ಬಳಿಕ ಚುನಾವಣಾ ಆಯೋಗವು ಮೊದಲ ಬಾರಿ ನೋಟಾ ಆಯ್ಕೆಯನ್ನು ಅಕ್ಷರದ ಸಂಕೇತವಾಗಿ ನೀಡಿತ್ತು. ಇದರಿಂದ ಒಂದಷ್ಟು ಗೊಂದಲಗಳು ಕೂಡ ಉಂಟಾಗಿದ್ದವು. ಆದರೆ ಇದೀಗ ಆಯೋಗವು ನೋಟಾ ಚಿಹ್ನೆಯನ್ನು ರೂಪಿಸಿದ್ದು, ಗುಣಿಸು ಗುರುತು ಅಥವಾ ತಪ್ಪು ರೀತಿಯಲ್ಲಿ ಇರುವ ಚಿಹ್ನೆಯು ಮುಂಬರುವ ಚುನಾವಣೆಯಲ್ಲಿ ಇವಿಎಂ ಮೇಲೆ ಕಾಣಿಸಲಿದೆ.
ಮೊದಲ ಬಾರಿ ನೋಟಾ ವೋಟು
2013 ರಲ್ಲಿ ನಡೆದ ಚತ್ತೀಸ್ಗಢ್, ಮಿಜೋರಾಂ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಮತ್ತು ದೆಹಲಿಯ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ಮೊದಲ ಬಾರಿಗೆ ಬಳಸಲಾಯಿತು. ಆರಂಭದಲ್ಲಿ ಅಷ್ಟೇನು ಮಹತ್ವ ಪಡೆಯದಿದ್ದ ಈ ಆಯ್ಕೆ, ಮುಂಭೈ ಮಹಾನಗರ ಪಾಲಿಕೆ ಉಪ ಚುನಾವಣೆ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯಿತು. ಅಚ್ಚರಿ ಎಂದರೆ ಪಾಲಿಕೆ ಚುನಾವಣೆಯಲ್ಲಿ ಮೊದಲ ಬಾರಿ ನೀಡಲಾಗಿದ್ದ ಈ ಆಯ್ಕೆಯಲ್ಲಿ 48 ಮಂದಿ ನೋಟಾ ಚಲಾಯಿಸಿದ್ದರು. ಈ ಮೂಲಕ ತಾವು ಅಭ್ಯರ್ಥಿಗಳನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದರು. ಸಾಮಾನ್ಯವಾಗಿ ಇವಿಎಂ ಯಂತ್ರಗಳ ಕೊನೆ ಆಯ್ಕೆಯಾಗಿ ನೋಟಾ ಬಟನ್ ಇರುತ್ತದೆ. ಅಂದರೆ 10 ಅಭ್ಯರ್ಥಿಗಳು ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ 11ನೇ ಆಯ್ಕೆಯಾಗಿ ನೋಟಾ ಕಾಣಿಸಲಿದೆ.