ನ್ಯೂಸ್ ನಾಟೌಟ್ :ಚುನಾವಣಾ ದಿನಾಂಕ ಸಮೀಪಿಸುತ್ತಿದೆ.ಮತದಾರರು ಜಾಗೃತಗೊಲ್ಳಬೇಕು.ಮದ್ಯ ಇನ್ನಿತರ ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಿದಲ್ಲಿ ಕೇವಲ ಹೆಂಡಕ್ಕಾಗಿ ನಮ್ಮನ್ನು ನಾವು ಮಾರಿಕೊಂಡಂತೆ. ಹೀಗಾಗಿ ಯಾವುದೇ ಆಮಿಷಗಳಿಗೂ ಒಳಗಾಗದೇ ನಿರ್ಧಾರಕ್ಕೆ ಧಕ್ಕೆಯನ್ನುಂಟುಮಾಡುವ ಕೆಲಸ ಮಾಡಬಾರದು.
ಎಲ್ಲಾ ರಾಜಕೀಯ ಪಕ್ಷಗಳು ಪ್ರಮಾಣ ಮಾಡಬೇಕು.ಏನೆಂದರೆ ಚುನಾವಣೆಗಳಲ್ಲಿ ಮದ್ಯ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ ಎಂದು.ಮದ್ಯ ಮುಕ್ತ ಆಡಳಿತವನ್ನು ಪ್ರಣಾಳಿಕೆಯಲ್ಲಿ ತೋರಿಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಹೇಳಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮದ್ಯಮುಕ್ತ ಚುನಾವಣೆ ಕುರಿತು ಮತದಾರರ ಜಾಗೃತಿ ಪತ್ರವನ್ನು ಬಿಡುಗಡೆ ಮಾಡಿ, ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭ ಮುಗ್ಧ ಜನರಿಗೆ ಮದ್ಯ ಕುಡಿಸಿ ಮತ ಪಡೆಯುವ ಪ್ರಯತ್ನ ನಡೆಯಬಹುದು. ಅಂತಹ ಪ್ರಯತ್ನಗಳು ಎಲ್ಲಿಯೇ ಆಗಲಿ, ಯಾರಿಂದಲೇ ಆಗಲಿ ನಡೆದಲ್ಲಿ ಅದನ್ನು ಬಲವಾಗಿ ವಿರೋಧಿಸಿ, ಮತದಾರರಿಗೆ ಹೆಂಡದ ಆಮಿಷ ಒಡ್ಡಿ ಮತ ಪಡೆಯುವ ಪ್ರಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ತಕ್ಷಣ ತಾಲೂಕಿನ ಮುಖ್ಯ ಚುನಾವಣಾಧಿಕಾರಿಗಳಿಗೆ, ತಹಶೀಲ್ದಾರ್ಗೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
19,923 ಜಾಗೃತಿ ಕಾರ್ಯಕ್ರಮ:
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಕಳೆದ 31 ವರ್ಷಗಳಿಂದ ಕರ್ನಾಟಕ ರಾಜ್ಯದಾದ್ಯಂತ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಕಾರ್ಯೋನ್ಮುಖವಾಗಿದೆ. ಸಂಘಟನೆಯ ಮೂಲಕ ಮದ್ಯವರ್ಜನ ಶಿಬಿರ, ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಗಳು ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ, ನವಜೀವನ ಸಮಿತಿ, ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾವಿರಾರು ವ್ಯಸನಭಾದಿತ ಕುಟುಂಬಗಳಿಗೆ ನೆರವಾಗಿದೆ. ಇವೆಲ್ಲ ಪೂಜ್ಯರಾದ ಡಾ| ಡಿ.ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು ಇದುವರೆಗೆ 19,923 ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಪದ್ಮನಾಭ ಶೆಟ್ಟಿ ತಿಳಿಸಿದರು.