ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳಿಂದ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಘಟನೆ ಬಗ್ಗೆ ಆರೋಪ ಪ್ರತ್ಯಾರೋಪ ಮಾಡುವುದಕ್ಕಿಂತ ನಾವೆಲ್ಲ ಮತ್ತೆ ಒಂದಾಗಿ ಪಕ್ಷ, ಸಂಘಟನೆ, ದೇಶ ಕಟ್ಟೋಣ ಎಂದು ವಿಜಯಪುರ ನಗರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಪುತ್ತೂರಲ್ಲಿ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಅಮಾನುಷವಾಗಿ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಣೆಗಾಗಿ ಮತ್ತು ಸಂಘಟನೆಯೊಳಗಿನ ಮನಸ್ತಾಪದ ಕುರಿತು ಚರ್ಚಿಸಿ ಸರಿ ಪಡಿಸುವ ನಿಟ್ಟಿನಲ್ಲಿ ಪಕ್ಷದ ಸೂಚನೆಯಂತೆ ಪುತ್ತೂರಿಗೆ ಆಗಮಿಸಿದ ಯತ್ನಾಳ್ ಪುತ್ತೂರು ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿ ಬಳಿಕ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದೆಂದು ರಾಜ್ಯಾಧ್ಯಕ್ಷರ ಜತೆ ನಿನ್ನೆ ಮಾತನಾಡಿದ್ದೆ. ಅವರ ಭಾವನೆ ಹೇಳಿಕೊಂಡಿದ್ದಾರೆ. ಸುಳ್ಳು ಮಾಹಿತಿಗಳಿಂದ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ನಾನು ಹೇಗೆ ಎಲ್ಲವನ್ನು ನಿಯಂತ್ರಣ ಮಾಡಿ ಗೆದ್ದು ಬಂದಿದ್ದೇನೋ ಅದೇ ರೀತಿ ಇಲ್ಲೂ ಸಹ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ, ಸಂಘ ಪರಿವಾರಕ್ಕೆ ಕೆಟ್ಟ ಹೆಸರು ಬಾರದ ರೀತಿಯಲ್ಲಿ ನಾವೆಲ್ಲ ಸೇರಿ ಒಂದಾಗಿ ಪಕ್ಷ, ಸಂಘಟನೆ, ದೇಶ ಕಟ್ಟೋಣ ಎಂದು ಕಾರ್ಯಕರ್ತರಲ್ಲಿ ವಿನಂತಿ ಮಾಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.