ನ್ಯೂಸ್ ನಾಟೌಟ್ : ವಿದ್ಯಾರ್ಥಿನಿಯೊಬ್ಬಳಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸಾಗುತ್ತಿದ್ದ ವೇಳೆ ಟ್ರಾಫಿಕ್ ಸಮಸ್ಯೆಯಿಂದಾಗಿ ಆಕೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.ಸೂಕ್ತ ಸಮಯದಲ್ಲಿ ಗಿಡಮೂಲಿಕೆ ತೆಗೆದುಕೊಳ್ಳಲಾಗದೇ ಈ ದುರಂತ ಸಂಭವಿಸಿತೆಂದು ವರದಿಯಾಗಿದೆ.
ಈ ಘಟನೆ ನಡೆದಿದ್ದು,ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ.ಉಪ್ಲೆಯ ಯುವತಿ ವಿನುತಾ ಶೇಟ್ ಮೃತ ಯುವತಿ.ಈಕೆ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು,ಇನ್ನೇನು ಕೊನೆ ಪರೀಕ್ಷೆ ಮುಗಿದು ಮನೆ ಸೇರ್ತಿನಿ ಅನ್ನುವಷ್ಟರೊಳಗೆ ಆಕೆಗೆ ಅನಾರೋಗ್ಯ ಕಾಣಿಸಿಕೊಂಡಿದೆ.ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗುತ್ತಿದ್ದಳು.ಈ ವೇಳೆ ದುರದೃಷ್ಟವಶಾತ್ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ.ಆಕೆಗೆ ಗಿಡಮೂಲಿಕೆ ಔಷಧಿ ತೆಗೆದುಕೊಳ್ಳಲು ಆಗದೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆನ್ನುವ ದಾರುಣ ದುರಂತ ನಡೆದಿದೆಯೆನ್ನಲಾದ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲಿಕೆಯಲ್ಲಿ ಸದಾ ಮುಂದಿದ್ದ ಈಕೆಗೆ ಪರೀಕ್ಷೆ ಬರೆಯುವ ಸಂದರ್ಭದಲ್ಲಿಯೇ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿದ್ದು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಬೇಕು ಎನ್ನುವ ಮಹದಾಸೆಯಿಂದ ಆರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ಕೊಡದೆ ಪರೀಕ್ಷೆ ಬರೆದು ಮುಗಿಸಿದ್ದಾಳೆ. ಪರೀಕ್ಷೆ ಮುಗಿಸಿ ಮನೆಗೆ ಬರುವ ಮೊದಲು ತಂದೆಗೆ ಅನಾರೋಗ್ಯದ ಬಗ್ಗೆ ತಿಳಿಸಿದ್ದಾಳೆ. ತಂದೆ ತಾಯಿ ಇಬ್ಬರೂ ಮಂಗಳೂರಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಮನೆಗೆ ಕರೆದುಕೊಂಡು ಹೊರಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಊರವರು ಆಕೆಗೆ “ಸರ್ಪಸುತ್ತು” ಆಗಿತ್ತು ಎಂದು ತಿಳಿಸಿದ್ದು,ಆದರೆ ಶರೀರದ ಒಳಗಡೆ ಆಗಿದ್ದರಿಂದ ವೈದ್ಯರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಸಿಗಲಿಲ್ಲ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಆಸ್ಪತ್ರೆಯಿಂದ ಕರೆತರಲು ತಂದೆ ತಾಯಿ ಇಬ್ಬರೂ ಬಂದಿದ್ದು,ನಾಟಿ ಔಷಧಿ ಮಾಡಿಸಿ ಗುಣಪಡಿಸುವ ಉದ್ದೇಶ ಅವರಲ್ಲಿತ್ತು.ಆದರೆ ವಿಧಿಯಾಟ ಎಂಬಂತೆ ಮಾರ್ಗಮಧ್ಯೆ ಟ್ಯಾಂಕರ್ ಪಲ್ಟಿಯಾಗಿದ್ದುದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಹೀಗಾಗಿ ಮಗಳಿಗೆ ಚಿಕಿತ್ಸೆ ಕೊಡಿಸಲು ಅಸಾಧ್ಯವಾಗಿದ್ದು,ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ.ಹೆತ್ತ ಮಗಳನ್ನು ಕಳೆದುಕೊಂಡು ಪೋಷಕರ ರೋಧನ ಮುಗಿಲು ಮುಟ್ಟಿದೆ.