ನ್ಯೂಸ್ ನಾಟೌಟ್: ಅನೇಕ ಕಾರಣಗಳಿಂದಾಗಿ ಸದ್ದು ಮಾಡುತ್ತಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಇದೀಗ ದೇವಳದ ಅಂಗಳಕ್ಕೂ ತಲುಪಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಬ್ಯಾನರ್ ಅಳವಡಿಸಲಾಗಿದೆ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಬ್ಯಾನರ್ನಲ್ಲಿ ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬೆಯ ದರ್ಶನಕ್ಕೆ ಬರಬೇಕಾದರೆ ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಎಂದು ಬರೆಯಲಾಗಿದೆ. ಇದು ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬ್ಯಾನರ್ ಭಾರಿ ವೈರಲ್ ಆಗಿವೆ.
ಕೊಲ್ಲೂರು ದೇವಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳದ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಬ್ಯಾನರ್ ಹೆಚ್ಚಿನ ಮಹತ್ವ ಪಡೆದಿದೆ. ಹಿಂದೂ ಜಾಗರಣ ಕಾರ್ಯಕರ್ತರು ಈ ಬ್ಯಾನರ್ ಅಳವಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಿನಿಮಾದ ಬಗ್ಗೆ ಹಿಂದೂಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಕೆಲವರು ಟೀಕಿಸಿದ್ದಾರೆ. ಕೇರಳದಲ್ಲಿ ನಡೆದಿತ್ತು ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಘಟನೆಗಳನ್ನು ಆಧರಿಸಿ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಲಾಗಿದೆ. ಟೀಸರ್ ಬಿಡುಗಡೆ ಆದಾಗಲೇ ಈ ಚಿತ್ರ ವಿವಾದ ಸೃಷ್ಟಿ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಬಾಕ್ಸ್ ಆಫೀಸ್ ಬೇಟೆ ಮುಂದುವರಿದಿದೆ. ಸತತ 11 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಅಚ್ಚರಿ ಎಂದರೆ ಮೇ 14ರಂದು ಬರೋಬ್ಬರಿ 23 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ ಚಿತ್ರದ ಒಟ್ಟು ಕಲೆಕ್ಷನ್ 136.74 ಕೋಟಿ ರೂಪಾಯಿ ತಲುಪಿದೆ. ನಟಿ ಅದಾ ಶರ್ಮಾ ಅವರು ಈ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೇವಾಲಯದ ದ್ವಾರ ಹಾಗೂ ಆವರಣ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ ಎಂದು ತಿಳಿದು ಬಂದಿದೆ.