ನ್ಯೂಸ್ ನಾಟೌಟ್: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಬಾಲ್ -ಟಿ10 ಸೋಮವಾರದ ಜಿಪಿಎಲ್ ಕ್ರಿಕೆಟ್ನ ಎರಡನೇ ಪಂದ್ಯಾಟದಲ್ಲಿ ಕುಕ್ಕನೂರು ಬುಲ್ಸ್ ಮತ್ತು ಟೀಮ್ ಭಗವತಿ ನಡುವಿನ ಸೆಣಸಾಟದಲ್ಲಿ ಟೀಮ್ ಭಗವತಿ ಗೆಲುವು ಸಾಧಿಸಿತು.
ದಿನದ ಎರಡನೇ ಪಂದ್ಯಾಟದಲ್ಲಿ ಟಾಸ್ ಗೆದ್ದ ಕುಕ್ಕುನೂರು ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ನಿಗದಿತ 10 ಓವರ್ಗಳಲ್ಲಿ ಬ್ಯಾಟ್ ಮಾಡಿದ ಟೀಮ್ ಭಗವತಿ 5 ವಿಕೆಟ್ ನಷ್ಟಕ್ಕೆ 94 ರನ್ ಪೇರಿಸಿತು. ರಣಜಿ ಆಟಗಾರ ಸುಳ್ಯಕೋಡಿ ರಿಷಿ ಬೋಪಣ್ಣ 44(20) ರನ್ ಗಳಿಸಿ ಗಮನ ಸೆಳೆದರು. ಕುಕ್ಕುನೂರು ಪರವಾಗಿ ಯಾಲದಾಳು ಯಶಿನ್ ಬೋಪಣ್ಣ 3 ವಿಕೆಟ್, ಓಂಪ್ರಕಾಶ್ ಉಡುದೋಳಿ 2 ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಕುಕ್ಕುನೂರು ತಂಡ 10 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 77 ರನ್ ಅಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು. ಟೀಮ್ ಭಗವತಿ ಕೊನೆಯ ಓವರ್ನಲ್ಲಿ ಕಟ್ಟೆಮನೆ ಜಾಹ್ನವಿ ಸೋನಾರನ್ನು ಕಣಕ್ಕಿಳಿಸಿ ಕೇವಲ 2 ರನ್ ನೀಡಿ ಒಂದು ವಿಕೆಟ್ ಪಡೆದದ್ದು ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕೊನೆಯ ಎಸೆತದಲ್ಲಿ ರನೌಟ್ ಆಗಿದ್ದು ಕೂಡ ವಿಶೇಷ. ಮಗಳ ಬೌಲಿಂಗ್ ಸಮಯದಲ್ಲಿ ವೀಕ್ಷಕ ವಿವರಣೆಗಾರರಾಗಿ ತಂದೆಯೇ ಕುಳಿತಿದ್ದುದು ಕೂಡ ಈ ಪಂದ್ಯದ ವಿಶೇಷ. ಸುಳ್ಯಕೋಡಿ ರಿಷಿ ಬೋಪಣ್ಣ ಪಂದ್ಯಪುರುಷೋತ್ತಮ ಪ್ರಶಸ್ತಿ ಪಡೆದರು.