ನ್ಯೂಸ್ ನಾಟೌಟ್: ಕ್ರೀಡೆ ಅಂದ್ರೆ ನಮಗೆಲ್ಲರಿಗೂ ತಕ್ಷಣ ನೆನಪಾಗುವುದು ಕೊಡಗು. ಕೊಡಗಿನ ಹಲವಾರು ಸಾಧಕರು ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ್ದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಂತಹ ಸಾಧಕರ ನೆಲದಲ್ಲಿ ಭಾನುವಾರ 25ನೇ ವರ್ಷದ ಡಿ. ಶಿವಪ್ಪ ಮೆಮೋರಿಯಲ್ ಗೋಲ್ಡ್ ಕಪ್ ರಾಜ್ಯಮಟ್ಟದ ಫುಟ್ಬಾಲ್ ಕೂಟದ ಫೈನಲ್ ಪಂದ್ಯ ನಡೆಯಿತು.
ಕೇರಳದ ಮಲಪ್ಪುರಂ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಸುಂಟಿಕೊಪ್ಪ ಮಿಡ್ ಸಿಟಿ ತಂಡ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡಿತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದ ಫೈನಲ್ ಪಂದ್ಯ ಪೂರ್ಣ ಅವಧಿಯಲ್ಲಿ 1-1 ರಿಂದ ಡ್ರಾಗೊಂಡಿತು. ಈ ಹಂತದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ಸೆಣಸಿನಲ್ಲಿ 4-1 ಗೋಲಿನಿಂದ ಮಲಪ್ಪುರಂ ತಂಡ ಗೆಲುವು ಸಾಧಿಸಿತು.
ವಿಜೇತ ಮಲಪ್ಪುರಂ ತಂಡ 1 ಲಕ್ಷ ರೂ. ನಗದು ಪ್ರಶಸ್ತಿ , ಸ್ಮರಣಿಕೆ ಪಡೆದುಕೊಂಡರೆ ರನ್ನರ್ ಅಪ್ ಸುಂಟಿಕೊಪ್ಪ ಮಿಡ್ ಸಿಟಿ ತಂಡವು 50 ಸಾವಿರ ರೂ. ನಗದು ಬಹುಮಾನ ಹಾಗೂ ಸ್ಮರಣಿಕೆ ಪಡೆದುಕೊಂಡಿತು. ಸುಂಟಿಕೊಪ್ಪದ ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ಕೂಟವನ್ನು ಆಯೋಜಿಸಲಾಗಿತ್ತು. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಟದ ಪ್ರಮುಖ ಆಕರ್ಷಣೆಯಾಗಿದ್ದರು. ಒಡೆಯರ್ ಹಾಗೂ ಬೆಟ್ಟಗೇರಿ ಗ್ರೂಪ್ ಆಫ್ ಎಸ್ಟೇಟ್ಸ್ ನ ಡಿ. ವಿನೋದ್ ಶಿವಪ್ಪ ಜಂಟಿಯಾಗಿ ಫೈನಲ್ ಪಂದ್ಯದ ಉದ್ಘಾಟನೆ ನಡೆಸಿದರು.
ಇದೇ ವೇಳೆ ಕೂಟದ ಸಂಘಟಕರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಶಾಲು ಹೊದಿಸಿ ಗೌರವಿಸಿದರು. ಇದಕ್ಕೂ ಮೊದಲು ನಡೆದ ಮೆರವಣಿಗೆಯಲ್ಲಿ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ,ಚಲನಚಿತ್ರ ನಟಿ ಶುಭ್ರ ಅಯ್ಯಪ್ಪ , ನಟ ಅಭಿಷೇಕ್ ಅವರನ್ನು ತೆರೆದ ಜೀಪಿನ ಮೂಲಕ ಸುಂಟಿಕೊಪ್ಪ ಟೌನ್ ನಿಂದ ಕರೆತರಲಾಯಿತು. ಈ ವೇಳೆ ಗೊಂಬೆ , ಡೊಳ್ಳುಕುಣಿತ , ಬ್ಯಾಂಡ್ ಸೆಟ್ ನ ಸದ್ದು ಆಕರ್ಷಣೀಯವಾಗಿತ್ತು.
ಬೆಟ್ಟಗೇರಿ ಗ್ರೂಪ್ ಆಫ್ ಎಸ್ಟೇಟ್ಸ್ ನ ಡಿ . ವಿಶಾಲ್ ಶಿವಪ್ಪ , ಪಂಚಾಯತ್ ಅಧ್ಯಕ್ಷೆ ಶಿವಮ್ಮ ಮಹೇಶ್, ಉಪಾಧ್ಯಕ್ಷ ಕೆ. ಪ್ರಸಾದ್ ಕುಟ್ಟಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ. ಹೆಚ್. ವೇಣುಗೋಪಾಲ್, ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಮಾಜಿ ಶಾಸಕ ಕೆ. ಎಂ. ಇಬ್ರಾಹಿಂ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಪಿ.ಎಂ. ಲತೀಫ್, ಕೆ. ಪಿ. ಚಂದ್ರಕಲಾ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ಬ್ಲೂ ಬಾಯ್ಸ್ ಯೂತ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಜೆರ್ಮಿ ಡಿಸೋಜ, ಕಾಫಿ ಬೆಳೆಗಾರ ಆನಂದ ಬಸಪ್ಪ, ಬೆಂಗಳೂರು ಎಂಬಸ್ಸಿ ಗ್ರೂಪ್ ನ ಉಪಾಧ್ಯಕ್ಷ ಹರಪಹಳ್ಳಿ ರವೀಂದ್ರ, ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಹೆಚ್.ಎಸ್. ಚಂದ್ರಮೌಳಿ, ಕುಶಾಲನಗರ ಎಸ್.ಎಲ್.ಎನ್. ಗ್ರೂಪ್ ನ ವಿಶ್ವನಾಥನ್, ಸಾತಪ್ಪನ್, ಮಾದಾಪುರ ಕಾಫಿ ಬೆಳೆಗಾರರಾದ ಗೌತಮ್ ಬಸಪ್ಪ, ಬೆಂಗಳೂರು ಎಸ್ ಮಾರ್ಟ್ ನ ಸಿ.ಇ.ಒ. ಪ್ರಶಾಂತ್ ವೆಂಕಟರಮಣ, ಸ್ಯಾಂಡಲ್ ವುಡ್ ಎಸ್ಟೇಟ್ ನ ಕಾಫಿ ಬೆಳೆಗಾರರಾದ ಝಯಿದ್, ಸಿದ್ಧಾಪುರದ ಮರ ವ್ಯಾಪಾರಿಯಾದ ಪಿ.ಸಿ. ಹಸೈನಾರ್ ಅತಿಥಿಗಳಾಗಿ ಉಪಸ್ಥಿತರಿದ್ದರು.