ನ್ಯೂಸ್ ನಾಟೌಟ್ :ಚುನಾವಣಾ ದಿನಾಂಕ ಸಮೀಪಿಸುತ್ತಿದೆ.ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ.ಆದರೆ ಸುಳ್ಯ ತಾಲೂಕಿನ ಕೆಲವೊಂದು ಕಡೆಗಳಲ್ಲಿ ಈಗಲೂ ಮತದಾನ ಬಹಿಷ್ಕಾರದ ಬ್ಯಾನರ್ ಪ್ರತ್ಯಕ್ಷವಾಗುತ್ತಲೇ ಇದೆ.ಇದೀಗ ಸುಳ್ಯ ತಾಲೂಕಿನ ಜಯನಗರ ಕುತ್ಪಾಜೆ ಸ್ಥಳೀಯರು ತಮ್ಮ ಕಾಲೊನಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗದ ಹಿನ್ನೆಲೆಯಲ್ಲಿಚುನಾವಣಾ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದ್ದಾರೆ.
ಬೇಡಿಕೆ ಈಡೇರದ ಹಿನ್ನಲೆ ಕಳೆದ ಕೆಲವು ದಿನಗಳ ಹಿಂದೆ ಇಲ್ಲಿ ಅಳವಡಿಸಲಾಗಿದಂತಹ ಬ್ಯಾನರನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರ ಮನವೊಲಿಸಿ ಬ್ಯಾನರ್ ತೆರವುಗೊಳಿಸಿದ್ದರು.ಆದರೆ ಅಧಿಕಾರಿಗಳು ಭರವಸೆ ನೀಡಿದ ಬಳಿಕವೂ ಕುಡಿಯುವ ನೀರಿನ ವ್ಯವಸ್ಥೆ ಆಗದ ಕಾರಣ ಮತ್ತೆ ಸ್ಥಳೀಯರು ಆಕ್ರೋಶಿತರಾಗಿದ್ದಾರೆ. ಹೀಗಾಗಿ ಮೇ 1ರಂದು ಸಂಜೆ ಮತ್ತೆ ಅದೇ ಸ್ಥಳದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.