ನ್ಯೂಸ್ ನಾಟೌಟ್ : ನವೀನ್ ರೈ ಮೇನಾಲ ಈ ಹೆಸರು ಸುಳ್ಯ ಭಾಗದ ಅನೇಕರಿಗೆ ಚಿರಪರಿಚಿತ.ಬಿಜೆಪಿಯ ಮುಖಂಡ,ಜಿ.ಪಂ. ಮಾಜಿ ಸದಸ್ಯ ಹೀಗೆ ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯರಾಗಿದ್ದವರು.ಆದರೆ ವಿಧಿಯಾಟವೆಂಬಂತೆ ಇಂದು ಅವರು ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಇವರ ನಿಧನದ ವಾರ್ತೆ ಕೇಳಿ ಕುಟುಂಬಸ್ಥರು,ಬಂಧು ಮಿತ್ರರು,ಹಿತೈಷಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ನವೀನ್ ರೈ ಮೇನಾಲ ಇನ್ನಿಲ್ಲ ಅನ್ನುವ ಸುದ್ದಿ ತಿಳಿದು ಆ ಊರಿನ ಜನತೆ ಒಂದು ಕ್ಷಣ ಶಾಕ್ ಗೊಳಗಾಗಿದ್ದಾರೆ.ಯಾರೂ ಊಹಿಸಿರದ ಘಟನೆ ನಡೆದೇ ಹೋಗಿದೆ.ದಿನಾ ಲವಲವಿಕೆಯಿಂದಿದ್ದ ಹಾಗೂ ಎಲ್ಲರೊಂದಿಗೆ ಹಸನ್ಮುಖಿಯಾಗಿ ಮಾತನಾಡುತ್ತಿದ್ದ ನವೀನ್ ರೈ ಅವರ ನಿಧನ ಆಘಾತವನ್ನುಂಟು ಮಾಡಿದೆ. ಇವರ ಮನೆ ಇರುವುದು ಸುಳ್ಯದ ಮೇನಾಲ ಎಂಬಲ್ಲಿ.ಕೃಷಿ ಭೂಮಿಯನ್ನು ಹೊಂದಿದ್ದರು.ಮಾತ್ರವಲ್ಲ, ಇವರೊಬ್ಬ ಉದ್ಯಮಿಯೂ ಹೌದು.ಮೇನಾಲ ಎಂಬಲ್ಲಿ ಕೃಷಿ ತೋಟವಿದ್ದರೂ ಇನ್ನೊಂದು ಬದಿಯಲ್ಲಿ ಹೊಳೆಗೆ ಪಂಪ್ ಅಳವಡಿಸಲಾಗಿತ್ತು.ಆದರೆ ಇಲ್ಲಿಗೆ ತುದಿಯಡ್ಕ ಮೂಲಕ ಸಾಗಿಯೇ ಬರಬೇಕು.ಹೀಗಾಗಿ ನವೀನ್ ರೈ ಮೇನಾಲ ಅವರು ಇಂದು ಬೆಳಗ್ಗಿನ ವೇಳೆ ಗಿರಿಜಾ ಶಂಕರ್ ಅವರ ಮನೆ ಬಳಿ ಬೈಕ್ ನಿಲ್ಲಿಸಿ ಪಂಪ್ ಹತ್ತಿರ ತೆರಳುತ್ತಾರೆ.ಕೃಷಿ ತೋಟಗಳಿಗೆ ನೀರುಣಿಸಲೆಂದು ಇವರು ಆಗಾಗ ಅಲ್ಲಿಗೆ ಬಂದು ಹೋಗುತ್ತಿದ್ದು,ಇಂದು ಸಮಯಕ್ಕೆ ಸರಿಯಾಗಿ ಸರಿಸುಮಾರು ೧೦.೩೦ಕ್ಕೆ ಸ್ಥಳಕ್ಕೆ ಬಂದಿದ್ದರು ಎನ್ನಲಾಗಿದೆ.
ಆದರೆ ಸಮರ್ಪಕವಾಗಿ ನೀರು ಬಂದಿಲ್ಲದೇ ಇರುವುದರಿಂದ ನವೀನ್ ರೈ ಅವರು ಪುಟ್ವಾಲ್ನಲ್ಲಿರುವ ಕಸ ತೆಗೆಯಲೆಂದು ಅಲ್ಲಿಗೆ ಹೋಗಿದ್ದರು ಎಂಬ ಮಾಹಿತಿಯಿದೆ.ಈ ವೇಳೆ ತಾನು ತಂದಿದ್ದ ಮೊಬೈಲ್ ,ವಾಚ್ ಮತ್ತಿತರ ವಸ್ತುಗಳೆಲ್ಲವನ್ನೂ ನದಿ ದಡದ ಸೈಡ್ ಗಿರಿಸಿ ನೀರಿಗಿಳಿದರು ಎಂಬ ಮಾಹಿತಿಯಿದೆ.ಆದರೆ ಆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ನವೀನ್ ರೈ ಯವರು ಹೋಗಿರುವುದನ್ನು ಗಮನಿಸಿದ್ದು,ಮರಳಿ ಬಾರದೇ ಇದ್ದುದ್ದರಿಂದ ಗಾಬರಿಯಾಗಿದ್ದಾರೆ. ಗಿರಿಜಾಶಂಕರ್ರವರ ಪತ್ನಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ.ನವೀನ್ ರೈಯವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಕ್ಷಣವೇಗದಲ್ಲಿಯೇ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಪೈಚಾರಿನ ಮುಳುಗು ತಜ್ಞರಿಗೂ ಮಾಹಿತಿ ಹೋಗಿ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದವರು ಕೂಡಾ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿದರು. ಈ ವೇಳೆ ಆಳದಲ್ಲಿ ನವೀನ್ ರೈಯವರ ಮೃತದೇಹ ಪತ್ತೆಯಾಯಿತು ಎಂದು ತಿಳಿದು ಬಂದಿದೆ.ನೀರಿನೊಳಗೆ ಕೆಸರು ತುಂಬಿದ್ದರಿಂದ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಮೃತದೇಹವನ್ನು ದಡಕ್ಕೆ ತಂದು ಗಿರಿಜಾಶಂಕರ್ರವರ ಮನೆಯ ಬಳಿಯಿಂದ ಆಂಬ್ಯುಲೆನ್ಸ್ನಲ್ಲಿ ಮರಣೋತ್ತರ ಪರೀಕ್ಷೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು.ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥಿವ ಶರೀರವನ್ನು ಮೇನಾಲದ ಅವರ ಮನೆಗೆ ಕೊಂಡೊಯ್ಯಲಾಗಿದೆ. ಸಂಜೆ 6 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಇಂದು ರಾತ್ರಿಯೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ತಿಳಿಸಿದೆ.