ನ್ಯೂಸ್ ನಾಟೌಟ್: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಜಯದ ಲೆಕ್ಕಾಚಾರ ನಡೆಯುತ್ತಿದೆ. ಗೆಲ್ಲೋದು ಯಾರು ಅನ್ನುವ ಚರ್ಚೆ ಜೋರಾಗಿದೆ. ಇಂತಹ ಚರ್ಚೆಗಳ ಸಾಲಿನಲ್ಲಿ ಇದೀಗ ಸುಳ್ಯ ವಿಧಾನಸಭಾ ಕ್ಷೇತ್ರವೂ ಸೇರಿಕೊಂಡಿರುವುದು ವಿಶೇಷ.
ಹೌದು, ಈ ಸಲ ಸುಳ್ಯದಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ಇನ್ನೊಂದು ಕಡೆಯಲ್ಲಿ ಸುಳ್ಯದಲ್ಲಿ ಶೇಕಡಾವಾರು ಮತದಾನ ಪ್ರಮಾಣವೂ ಕುಸಿದಿದೆ. ಈ ಕಾರಣದಿಂದ ಬಿಜೆಪಿಗೆ ಹೊಡೆತ ಬೀಳಬಹುದೇ ? ಅನ್ನುವ ಗುಸುಗುಸು ನಡೆಯುತ್ತಿದೆ. ಈ ಸಲದ ಗೆಲುವು ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರದ್ದಾ ಅಥವಾ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಅವರದ್ದಾ ಅನ್ನುವ ಚರ್ಚೆಗೆ ಈಗ ಹೆಚ್ಚು ತೂಕ ಬಂದಂತಾಗಿದೆ.
ಈ ಸಲ ಸುಳ್ಯದಲ್ಲಿ 81,401 ಪುರುಷರು ಹಾಗೂ 81,235 ಮಹಿಳೆಯರು ಸೇರಿ ಒಟ್ಟು 1,62,636 ಮಂದಿ ಮತ ಚಲಾಯಿಸಿದ್ದಾರೆ. ಈ ಸಲ ಸುಳ್ಯದಲ್ಲಿ ಶೇ.78.53ರಷ್ಟು ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.6.16 ಮತ ಚಲಾವಣೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಈ ಡಾಟಾ ನೋಡಿ ವಿಶ್ಲೇಷಿಸುವುದಾದರೆ ಇಂತಹ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಒಂದು ಕಡೆ ಆಮ್ ಆದ್ಮಿಯೂ ಕೆಲವು ಸಾವಿರ ಮತಗಳನ್ನು ಎಳೆದುಕೊಂಡರೆ ಇದರಿಂದ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳ ಗೆಲುವಿನ ಮೇಲೆ ಪರೋಕ್ಷ ಪರಿಣಾಮ ಬೀಳುವ ಸಾಧ್ಯತೆಯೂ ಹೆಚ್ಚಿದೆ.
2018ರಲ್ಲಿ ಶೇ.85.6 ಮತದಾನ ದಾಖಲಾಗಿತ್ತು. ಆ ಸಲ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ 26 ಸಾವಿರಕ್ಕೂ ಹೆಚ್ಚು ಮತದ ಅಂತರದಲ್ಲಿ ಗೆದ್ದಿದ್ದರು. ಬಿಜೆಪಿ ಭದ್ರಕೋಟೆಯಾದ ಸುಳ್ಯದಲ್ಲಿ ಕಾಂಗ್ರೆಸ್ ಕೂಡ 2013 ರಲ್ಲಿ ಗೆಲುವಿನ ಸನಿಹಕ್ಕೆ ಬಂದಿತ್ತು ಅನ್ನುವುದನ್ನು ಯಾರೂ ಮರೆಯುವಂತಿಲ್ಲ. ಅಂದು ಎಸ್ .ಅಂಗಾರ ಅವರ ವಿರುದ್ಧ ಅಂದಿನ ಕಾಂಗ್ರೆಸ್ ಸ್ಪರ್ಧಿಯಾಗಿದ್ದ ಡಾ.ರಘು ಅವರು ಕೇವಲ 1,373 ಮತಗಳ ಅಂತರದಿಂದ ಸೋತಿದ್ದರು. ಆ ಸಲ ಅಂಗಾರ ಅವರು ಗೆದ್ದಿದ್ದು ಬೆರಳೆಣಿಕೆಯ ಮತಗಳಿಂದ ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ರಾಜ್ಯದಾದ್ಯಂತ ಚುನಾವಣೆಯ ಎಕ್ಸಿಟ್ಫೂಲ್ ರಿಸಲ್ಟ್ ಹೇಳುವಂತೆ ಕಾಂಗ್ರೆಸ್ಗೆ ಸರಕಾರ ಮಾಡುವ ಅವಕಾಶ ಹೆಚ್ಚಿದೆ. ಆದರೆ ಸುಳ್ಯದಲ್ಲಿಯೂ ಅಧಿಕಾರ ಹಿಡಿಯುವ ಅವಕಾಶ ಹೆಚ್ಚಿದೆ ಅನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ. ಗೆದ್ದರೂ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಕೆಲವು ಸಾವಿರ ಮತಗಳ ಅಂತರದಿಂದಷ್ಟೇ ಗೆಲ್ಲಬಹುದು ಅನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಈ ಎಲ್ಲ ಚರ್ಚೆಗಳಿಗೆ ಮೇ೧೩ರಂದು ಸಂಪೂರ್ಣವಾಗಿ ತೆರೆ ಬೀಳಲಿದ್ದು ಗೆಲುವು ಯಾರಿಗೆ ಅನ್ನುವುದು ಅಧಿಕೃತವಾಗಿ ತಿಳಿದು ಬರಲಿದೆ.