ನ್ಯೂಸ್ ನಾಟೌಟ್ : ಕರಾವಳಿಯಾದ್ಯಂತ ಸೋಮವಾರದಿಂದ ಶಾಲಾರಂಭವಾಗಿದ್ದು, ರಜಾ ಮುಗಿಸಿರುವ ವಿದ್ಯಾರ್ಥಿಗಳು ಮೇ 31ರಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಜೂ.1ರಿಂದ ಪದವಿ ಪೂರ್ವ ಕಾಲೇಜುಗಳ ತರಗತಿಗಳು ಕೂಡ ಆರಂಭವಾಗಲಿವೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆ ಸೇರಿ ಒಟ್ಟು 3,127 ಶಾಲೆಗಳಿವೆ. ಶಾಲಾರಂಭದ ಹಿನ್ನೆಲೆಯಲ್ಲಿ ಸೋಮವಾರ ಎಲ್ಲ ಶಾಲೆಗಳು ತೆರೆದುಕೊಂಡಿದ್ದವು. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಪೂರ್ವ ತಯಾರಿ ಆರಂಭಿಸಿದ್ದಾರೆ. ಮಂಗಳವಾರವೂ ತಯಾರಿ ಪ್ರಕ್ರಿಯೆ ನಡೆಯಲಿದೆ. ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಸೋಮವಾರ ನಡೆಯಿತು. ಶಾಲಾ ಕೊಠಡಿಗಳು, ಬಿಸಿಯೂಟ ಕೊಠಡಿಗಳು, ಶಾಲಾ ಆವರಣ ಸ್ವಚ್ಛತೆಯನ್ನು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ನಡೆಸಿದ್ದಾರೆ. ಶೈಕ್ಷಣಿಕ ವರ್ಷದ ಆರಂಭಕ್ಕೆ ಅಗತ್ಯ ಸಿದ್ಧತೆ, ಶಾಲಾವರಣದ ಸ್ವಚ್ಛತೆ ಮೂಲಸೌಕರ್ಯಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಯಿತು. ವಿದ್ಯಾರ್ಥಿಗಳ ವೇಳಾಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಹಲವು ಕೆಲಸಗಳನ್ನು ನಡೆಸಲಾಯಿತು.
ಸೋಮವಾರ ಉಭಯ ಜಿಲ್ಲಾದ್ಯಂತ ಎಲ್ಲ ಶಾಲೆಗಳು ಆರಂಭವಾಗಿದ್ದು, ಮಕ್ಕಳನ್ನು ಬರಮಾಡಿಕೊಳ್ಳಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ. ಈ ಬಾರಿ ಶಾಲಾರಂಭಕ್ಕೆ ಮೊದಲೇ ಮಕ್ಕಳ ಸಮವಸ್ತ್ರ ಪೂರೈಕೆಯಾಗಿದೆ. ಜಿಲ್ಲೆಯ ಎಲ್ಲ ಶಾಲೆಗಳಿಗೆ ಈಗಾಗಲೇ ಸಮವಸ್ತ್ರ ಹಾಗೂ ಪಠ್ಯಪುಸ್ತಕ ರವಾನೆಯಾಗಿದೆ. (ಮೇ 31) ನಾಳೆ ವಿತರಣೆ ನಡೆಯಲಿದೆ.