ನ್ಯೂಸ್ ನಾಟೌಟ್ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಯುವಕನೋರ್ವ ಫೇಸ್ ಬುಕ್ ನಲ್ಲಿ ಕೀಳು ಬರಹವನ್ನು ಹಂಚಿಕೊಂಡಿದ್ದು,ಅದನ್ನು ಡಿಲೀಟ್ ಮಾಡಬೇಕೆಂದು ಒತ್ತಾಯಿಸಿ ಶಾಸಕರ ಅಭಿಮಾನಿ ಬಳಗ ಯುವಕನನ್ನು ಹುಡುಕಿಕೊಂಡು ಬಂದಿರುವ ಘಟನೆ ನಿನ್ನೆ ಸಂಜೆ ವರದಿಯಾಗಿದೆ.ಸುಮಾರು ೧೫ಕ್ಕೂ ಹೆಚ್ಚು ಶಾಸಕರ ಅಭಿಮಾನಿಗಳು ಸುಳ್ಯ ಜಯನಗರದಲ್ಲಿರುವ ಯವಕನ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.
ಫೇಸ್ಬುಕ್ ನಲ್ಲಿ ತಮ್ಮ ನಾಯಕರ ವಿರುದ್ಧ ಅವಹೇಳನಕಾರಿ ಬರಹವನ್ನು ನೋಡಿ ಉರಿದು ಹೋದ ಶಾಸಕರ ಅಭಿಮಾನಿ ಬಳಗದ ಯುವಕರು ಬರೆದ ವ್ಯಕ್ತಿಯನ್ನು ಕಂಡುಹಿಡಿದು ಆತನಿಗೆ ಕರೆ ಮಾಡಿ ಕೂಡಲೇ ಅದನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.ಈ ವೇಳೆ ಸುಳ್ಯದ ಪ್ರಮೀತ್ ಎಂಬ ಯುವಕ ತಾನು ಡಿಲೀಟ್ ಮಾಡಲ್ಲ ಎಂಬ ಉತ್ತರ ನೀಡಿದ್ದು ಅಲ್ಲದೇ , ಧೈರ್ಯವಿದ್ದರೆ ಸುಳ್ಯದ ಜಯನಗರಕ್ಕೆ ಬರುವಂತೆ ಸವಾಲು ಹಾಕಿದ್ದಾನೆ.ಈ ವೇಳೆ ಶಾಸಕರ ಅಭಿಮಾನಿಗಳ ಬಳಗ ಆತನನ್ನು ಹುಡುಕಿಕೊಂಡು ಬಂದಿದ್ದು,ಮನೆಗೆ ತೆರಳಿ ಫೇಸ್ ಬುಕ್ ನಲ್ಲಿರುವ ಪೋಸ್ಟ್ ನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿ,ಶಾಸಕರ ಜತೆ ಕ್ಷಮೆ ಕೇಳುವಂತೆ ಹೇಳಿದ್ದಾರೆ.ಇದಕ್ಕೆ ಯುವಕ ಒಪ್ಪದಿದ್ದಾಗ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ನೂರಾರು ಮಂದಿ ಸ್ಥಳೀಯರು ಜಮಾಯಿಸಿದರು.ವಿಷಯ ತಿಳಿದು ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿದ್ದು,ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು.ಬಳಿಕ ಯುವಕ ಹಾಗೂ ಪುತ್ತೂರಿನಿಂದ ಬಂದಿದ್ದ ಶಾಸಕರ ಅಭಿಮಾನಿ ಬಳಗದವರನ್ನು ವಿಚಾರಣೆಗೆಂದು ಸುಳ್ಯ ಠಾಣೆಗೆ ಕರೆದೊಯ್ದರು ಎನ್ನಲಾಗಿದೆ. ಘಟನೆಯ ವಿವರವನ್ನು ಪಡೆದ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ.ಕುಮಾರ್ ರವರು ಕೂಡಲೇ ಸುಳ್ಯ ಠಾಣೆಗೆ ಬಂದಿದ್ದು ಎರಡು ತಂಡದವರನ್ನು ವಿಚಾರಣೆ ನಡೆಸಿ, ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಿರುವುದಾಗಿ ತಿಳಿದುಬಂದಿದೆ.