ನ್ಯೂಸ್ ನಾಟೌಟ್: ಪರಶುರಾಮನ ಶ್ರೇಷ್ಠ ಭೂಮಿ ಪುತ್ತೂರು,ಅದೇ ರೀತಿ ಶ್ರೀರಾಮನ ಶ್ರೇಷ್ಠ ಬಂಟ ಹನುಮಂತನ ಶ್ರೇಷ್ಠ ನಾಡು ಕರ್ನಾಟಕಕ್ಕೆ ನಾನು ಬಂದಿದ್ದೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದರು.
ಇಂದು ಪುತ್ತೂರಿಗೆ ಆಗಮಿಸಿದ ಅವರು ಬೃಹತ್ ರೋಡ್ ಶೋದಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ಅವರು ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಅತ್ಯಂತ ಪ್ರಾಚಿನವಾದದ್ದು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಹನುಮ ಪಾವನ ಭೂಮಿ ಅಭಿವೃದ್ಧಿಯಲ್ಲಿ ತೊಡಗಿದೆ. ಆದರೆ ವಿಕೃತ, ವಿನಾಶಕಾರಿ ಮನಸ್ಥಿತಿಯ ಕಾಂಗ್ರೆಸ್ ಹನುಮನನ್ನು ಅವಮಾನಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅಸ್ತಿತ್ವವನ್ನೇ ಸುಳ್ಳು ಎಂದು ಕಾಂಗ್ರೆಸ್ ಹೇಳಿತ್ತು. ಪ್ರಭು ಶ್ರೀರಾಮ ಕೇವಲ ಕಲ್ಪನೆಯ ವ್ಯಕ್ತಿ ಇತಿಹಾಸದಲ್ಲಿ ಅಂತಹ ವ್ಯಕ್ತಿಯೇ ಇರಲಿಲ್ಲ ಎಂಬ ವಾದವನ್ನು ಮಾಡಿದ್ದು ನಮಗೆಲ್ಲ ತಿಳಿದಿದೆ. ಪ್ರಸ್ತುತ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳುತ್ತಿದೆ. ಇಂತಹ ರಾಷ್ಟ್ರದ್ರೋಹಿ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಬಜರಂಗದಳ ಭಾರತ ಮಾತೆಯ ಸೇವೆಗೆ ಮುಡುಪಾದ ಸಂಘಟನೆ, ಬಜರಂಗದಳ ರಾಷ್ಟ್ರಸೇವೆಗೆ ತಮ್ಮ ಜೀವವನ್ನು ಮುಡಿಪಾಗಿಟ್ಟಿರುವ ಯುವ ಸೈನ್ಯವನ್ನು ಹೊಂದಿದೆ. ಇಂತಹ ಸಂಘಟನೆಯನ್ನು ನಿಷೇಧಿಸುವ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡುವ ಕಾರ್ಯ ಮಾಡಬೇಕಿದೆ ಎಂದರು.ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಅದೇ ರೀತಿ ಅಭಿವೃದ್ಧಿ ವಿಚಾರದಲ್ಲಿ ಪ್ರಗತಿಪಥದಲ್ಲಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವದಂತೆ ಬಿಜೆಪಿ ಮುನ್ನಡೆಯುತ್ತಿದೆ ಎಂದರು. ಕರ್ನಾಟಕದಲ್ಲಿ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿಯ ಮೇರು ಪಥದಲ್ಲಿದೆ ಎಂದು ವಿವರಿಸಿದರು. ಪುತ್ತೂರಿನಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಅವರನ್ನು ಬಹುಮತದಿಂದ ಗೆಲ್ಲಿಸುವ ಕಾರ್ಯ ಮಾಡಬೇಕಾಗಿದೆ ಎಂದು ಕರೆ ನೀಡಿದರು.