ನ್ಯೂಸ್ ನಾಟೌಟ್ ಪ್ರತಿನಿಧಿ ಪುತ್ತೂರು: ಸರ್ಕಾರಿ ಸೇವೆಯಲ್ಲಿ ಸ್ಪಂದನೆ ನೀಡುವುದು ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ಬಡವರಿಗೆ ಒಳ್ಳೆಯ ಸೇವೆ ನೀಡುವಲ್ಲಿ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಇಂದಿನಿಂದಲೇ ತೊಡಗಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ವಿಧಾನಸಭೆಯ ಶಾಸಕರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿ ನಗರಸಭೆಗೆ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿ ನಗರಭೆಯ ಕಾರ್ಯವೈಖರಿ ಬಗ್ಗೆ ಚರ್ಚಿಸಿದರು.
ನನ್ನ ನಿರೀಕ್ಷೆಯನ್ನು ಬಡ ಜನರ ನಿರೀಕ್ಷೆ ಎಂದು ಎಲ್ಲರೂ ತಿಳಿದುಕೊಳ್ಳಬೇಕು. ಅಧಿಕಾರಿಗಳು ಕಾರ್ಯದ ಜತೆಗೆ ಮಾನವೀಯತೆಯನ್ನೂ ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶಾಸಕ ರೈ ಸೂಚಿಸಿದರು.
ಅಭಿವೃದ್ಧಿ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಿಂದ ಅನುದಾನ ತರುವ ಕೆಲಸ ನನ್ನದ್ದು. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಅಧಿಕಾರಿಗಳ ಸಹಾಯವಿಲ್ಲದೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.
ಮುಖ್ಯವಾಗಿ ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿ ಚರಂಡಿ ವ್ಯವಸ್ಥೆ ಅತೀ ಮುಖ್ಯವಾಗಿದೆ. ಡ್ರೈನೇಜ್ ನಿರ್ಮಾಣದ ಮೂಲಕ ಪುತ್ತೂರಿನ ಅಭಿವೃದ್ಧಿಯಾಗಬೇಕಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಇದಕ್ಕೆ ಬೇಕಾದ ಮಾಹಿತಿಯನ್ನು ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಅವರಿಂದ ಪಡೆದುಕೊಂಡರು. ಉಳಿದಂತೆ ಈಗಾಗಲೇ ಬಡವರಿಗೆ ನೀಡುವ ಮನೆ ನಿವೇಶನದ ಕುರಿತು, ವಿಲೇವಾರಿಯಾಗದೇ ಬಾಕಿ ಉಳಿದ ಮನೆ ನಿವೇಶನ ಆರ್ಜಿಗಳ ಕುರಿತು, ಉಪ್ಪಿನಂಗಡಿಯಿಂದ ಪುತ್ತೂರಿಗೆ ಕುಡಿಯುವ ನೀರು ಸರಬರಾಜು ಕುರಿತು ಮಾಹಿತಿ ಪಡೆದುಕೊಂಡರು.
ಪ್ರಾಕೃತಿಕ ವಿಕೋಪದ ಮುನ್ನ ತಯಾರಿ ಕುರಿತು ಶಾಸಕರು ಕೇಳಿದಾಗ, ಪೌರಾಯುಕ್ತರು ಈಗಾಗಲೇ ಪ್ರಾಕೃತಿಕ ವಿಕೋಪದಡಿ ದೊಡ್ಡ ದೊಡ್ಡ ತೋಡುಗಳ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು. ನಗರದಲ್ಲಿರುವ ಉದ್ದಿಮೆಗಳು, ನವೀಕರಣ, ಬಾಕಿ ಇರುವ ನವೀಕರಣ, ತ್ಯಾಜ್ಯ ವಿಲೇವಾರಿ, ಸಿಬ್ಬಂದಿ ಕೊರತೆ, ಸಿಬ್ಬಂದಿ ಖಾಯಮಾತಿ ಕುರಿತು ಮಾಹಿತಿ ಪಡೆದುಕೊಂಡರು.
ಸಭೆ ಆರಂಭವಾಗುತ್ತಿದ್ದಂತೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ತಾವು ನಿರ್ವಹಿಸುವ ಕೆಲಸ, ಹೆಸರು ಪರಿಚಯ ಮಾಡಿದರು. ಈ ಸಂದರ್ಭ ಶಾಸಕರನ್ನು ನಗರಸಭೆ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.