ನ್ಯೂಸ್ ನಾಟೌಟ್ ಪುತ್ತೂರು: ಬಸವ ವಸತಿ ಸೇರಿದಂತೆ ವಿವಿಧ ಯೋಜನೆಯಡಿ ಗ್ರಾಮ ಪಂಚಾಯತ್ ಮೂಲಕ ಗ್ರಾಮಸ್ಥರಿಗೆ ನೀಡುತ್ತಿದ್ದ ಮನೆಯನ್ನು ಬಡವನಿಗೆ ಕೊಡದೆ ರಾಜ್ಯದ ಬಿಜೆಪಿ ಸರ್ಕಾರ ವಂಚಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಆರೋಪಿಸಿದರು.
ಪುತ್ತೂರು ತಾಲೂಕಿನ ಪೆರುವಾಯಿಯಲ್ಲಿ ಮತಪ್ರಚಾರ ನಡೆಸಿ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಬರುವುದಾದರೆ ಸ್ವಾಗತವಿದೆ. ನೀವು ಹೆದರುವ ಅವಶ್ಯಕತೆ ಇಲ್ಲ. ಯಾಕೆಂದರೆ ನಿಮ್ಮ ಶಾಸಕರಿರುವಾಗಲೇ ನಿಮ್ಮಲ್ಲಿ ಅಭಿವೃದ್ಧಿ ಕೆಲಸ ಆಗಲಿಲ್ಲ. ಅಕ್ರಮ ಸಕ್ರಮ ಫೈಲ್ ಮಾಡಿಕೊಡಲಿಲ್ಲ. ನಾನು ಚುನಾವಣೆ ಗೆದ್ದು ಶಾಸಕನಾದರೆ ಪಕ್ಷ ಬೇಧವಿಲ್ಲದೆ ಎಲ್ಲರ ಸೇವೆ ಮಾಡುತ್ತೇನೆ ಎಂದರು.
ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಗೆದ್ದರೆ ಅವರೊಟ್ಟಿಗೆ ಹೋಗಬಹುದು ಎಂದು. ಅಂತಹ ದುಷ್ಟ ಬುದ್ದಿ ನನಗಿಲ್ಲ. ಗೆದ್ದರೆ ಕಾಂಗ್ರೆಸ್ನಲ್ಲಿ ಇದ್ದುಕೊಂಡೇ ಜನರ ಸೇವೆ ಮಾಡುತ್ತೇನೆ. ನನ್ನ ತಂದೆ ಶಿಕ್ಷಕರಾಗಿಯಾಗಿದ್ದವರು. ನಮಗೆ ಮನೆಯಿಂದಲೇ ಸಂಸ್ಕಾರ ಸಿಕ್ಕಿದೆ. ಆದ್ದರಿಂದ ಶಿಕ್ಷಕನ ಮಗ ಯಾರ ಮನಸ್ಸಿಗೂ ನೋವು ಕೊಟ್ಟಿಲ್ಲ. ಕೊಡುವುದು ಇಲ್ಲ ಎಂದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಕನಸು ಕಾಣುತ್ತಿದ್ದ ಬಿಜೆಪಿಗೆ ಈಗ ಅದುವೇ ತಿರುಗು ಬಾಣವಾಗಿದೆ. ಇಂದು ಬಿಜೆಪಿಯವರಿಂದಲೇ ಬಿಜೆಪಿ ಮುಕ್ತ ಕರ್ನಾಟಕದ ಆರಂಭವಾಗಿದೆ. ಬಿಜೆಪಿ ಕಟ್ಟಿ ಬೆಳೆಸಿದವರೇ ಕಾಂಗ್ರೆಸ್ ಬಾಗಿಲು ತಟ್ಟುತಿದ್ದು, ಅದರಲ್ಲಿ ಕೆಲವರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯ ವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಅಶ್ರಫ್ ಮತ್ತಿತರರು ಇದ್ದರು.