ನ್ಯೂಸ್ ನಾಟೌಟ್: ಬಿಜೆಪಿ ಭ್ರಷ್ಟಾಚಾರದ ಭಯೋತ್ಪಾದನೆ ನಡೆಸುತ್ತಿದೆ. ಇದಕ್ಕಾಗಿಯೇ ಚುನಾವಣೆ ಸಂದರ್ಭ ಧರ್ಮದ ವಿಚಾರವನ್ನು ಎಳೆದು ತಂದು ಜನರ, ನಡುವೆ ಕಂದಕ ಸೃಷ್ಟಿಸಿ ಮತಗಳಿಸುವ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.
ಮೂಲ್ಕಿ ಕೊಲ್ನಾಡಿನಲ್ಲಿ ಮಂಗಳೂರು ಉತ್ತರ ಮತ್ತು ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕರಾವಳಿಯ ಮಣ್ಣಿನಲ್ಲಿ ನ್ಯಾಯ, ನಿಷ್ಠೆಗೆ ಮಹತ್ವದ ಸ್ಥಾನವಿದೆ. ಅದೇ ರೀತಿ ಇಲ್ಲಿನ ರೈತರು, ಮೀನುಗಾರರು, ದೇಶ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಧರ್ಮ, ಧರ್ಮಗಳ ನಡುವೆ ಅಂತರ ಸೃಷ್ಟಿಸುವ ಆತಂಕಕಾರಿ ಕಾರ್ಯ ಮಾಡುತ್ತಿದೆ ಎಂದರು.
ಎರಡು ದಿನಗಳ ಮೊದಲು ದೇಶದ ಪ್ರಧಾನಿ ಇದೇ ವೇದಿಕೆಯಲ್ಲಿ ಆತಂಕವಾದದ ಕುರಿತು ಮಾತನಾಡಿದ್ದರು. ಆದರೆ ನಿಜವಾದ ಆತಂಕದ ವಿಷಯವೆಂದರೆ ಜನರಿಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ , ದಿನಸಿ ಬೆಲೆ ಏರಿಕೆಯಾಗಿರುವುದು. ಬಿಜೆಪಿ ಆಡಳಿತದಲ್ಲಿ ಜನರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಪ್ರತಿದಿನವೂ ಭವಿಷ್ಯದ ಚಿಂತೆಯಲ್ಲಿ ಆತಂಕದಿಂದ ದಿನದೂಡುವಂತಾಗಿದೆ. ಕರ್ನಾಟದ 5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡತನದಿಂದ 3000 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಧಿಕಾರದಲ್ಲಿರುವ 40 ಪರ್ಸೆಂಟ್ ಸರ್ಕಾರದಿಂದ ನೈಜ ಆತಂಕವಾದ ಸೃಷ್ಟಿಯಾಗಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗದ ಆತಂಕವಿದೆ. ಬಿಜೆಪಿ ಸರ್ಕಾರ ಪ್ರತಿ ವಿಚಾರಕ್ಕೂ ಕಮಿಷನ್ ನಿಗದಿಗೊಳಿಸಿದೆ. ಪ್ರಸ್ತುತ ಜನರನ್ನು ಲೂಟಿ ಮಾಡುವುದೇ ಬಹುದೊಡ್ಡ ಆತಂಕ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕರಾವಳಿಯಲ್ಲಿ ಹುಟ್ಟಿದ 4 ಬ್ಯಾಂಕ್ ವಿಲೀನ ಮಾಡಿ ಬಿಜೆಪಿ ಕರಾವಳಿಗರಿಗೆ ದ್ರೋಹ ಬಗೆದಿದೆ. ಇಂದಿರಾ ಸ್ಥಾಪಿಸಿದ ನವಬಂದರನ್ನು ಗುತ್ತಿಗೆಗೆ ನೀಡಿದ್ದಾರೆ. ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿದ್ದಾರೆ. ಸಾರ್ವಜನಿಕರ ಹಣವನ್ನು ಕೆಲವೇ ಉದ್ಯಮಿಗಳಿಗೆ ನೀಡಿದ್ದಾರೆ. ಇದುವೇ ನಿಜವಾದ ಭ್ರಷ್ಟಾಚಾರದ ನಿಜವಾದ ಆತಂಕ ಎಂದು ಪ್ರಿಯಾಂಕಾ ಹೇಳಿದರು. ರೈತರು, ಕೂಲಿ ಕಾರ್ಮಿಕರು, ಅಭಿವೃದ್ಧಿ ವಿಚಾರ ಪ್ರಸ್ತಾಪಿಸದೆ ಧರ್ಮಗಳ ನಡುವೆ ಅಂತರ ಸೃಷ್ಟಿಸಿ ಚುನಾವಣೆ ಎದುರಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿಯಿರುವ 5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿಮಾಡುತ್ತೇವೆ. 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ 10 ಕೆ.ಜಿ. ಅಕ್ಕಿ ನೀಡಲಾಗುವುದು ಇದು ಕಾಂಗ್ರೆಸ್ ಭರವಸೆ ಎಂದರು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಫಿಶಿಂಗ್ ಬೋಟ್ ಖರೀದಿಗೆ 15 ಲಕ್ಷ ಸಬ್ಸಿಡಿ, ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ, ಐಟಿ ಹಬ್ ನಿರ್ಮಾಣ, ಅಡಕೆ ಕೃಷಿಕರಿಗೆ ಕಲ್ಯಾಣಕ್ಕೆ 15 ಕೋಟಿ ರೂ.ಗಳ ಕಲ್ಯಾಣ ನಿಧಿ, ಬೀದರ್ನಿಂದ ಚಾಮರಾಜನಗರ ಇಂಡಿಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ, ಹರೀಶ ಕುಮಾರ್, ಅಭಯ ಚಂದ್ರ ಮೊದಲಾದವರಿದ್ದರು.