ನ್ಯೂಸ್ ನಾಟೌಟ್ : ‘ನಮ್ಮ ಪರವಾಗಿ ಮತ ಕೇಳುವ, ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಹಾಗೂ ಗೆದ್ದಾಗ ಹೊತ್ತು ಮೆರೆಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರ ಹಾಕುವ ಹಕ್ಕೂ ಇದೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.ಪಕ್ಷ ಸೋತು ಅನಾಥವಾಗಿರುವುದು, ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ….
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪಕ್ಷ ಸೋತಿರುವುದರಿಂದ ಅನಾಥವಾಗಿರುವುದು ಮತ್ತು ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ, ದಯವಿಟ್ಟು ನಮ್ಮನ್ನು ಕ್ಷಮಿಸಿ’ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದಾರೆ.‘ಅದೇ ರೀತಿ ಯಾರದ್ದೋ ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ಸೃಷ್ಟಿಯಾಗುವ ಷಡ್ಯಂತ್ರಕ್ಕೆ ಬಲಿಯಾಗುವುದು, ಯಾರ್ಯಾರನ್ನೋ ತೆಗಳುವುದು ಬೇಡ ಕಾರ್ಯಕರ್ತರೇ’ ಎಂದೂ ಮನವಿ ಮಾಡಿದ್ದಾರೆ.
ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಸಿ.ಎಂ. ಡಿ.ವಿ.ಸದಾನಂದ ಗೌಡ ವಿರುದ್ಧ ಬ್ಯಾನರ್ ಹಾಕಿದ್ದೂ ಅಲ್ಲದೇ ಬ್ಯಾನರ್ ನಲ್ಲಿದ್ದ ಭಾವಚಿತ್ರಗಳ ಮೇಲೆ ಚಪ್ಪಲಿ ಹಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಮಾರಾಣಾಂತಿಕ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪೈಶಾಚಿಕ ಕೃತ್ಯವನ್ನು ಖಂಡಿಸಿದ ಪ್ರತಾಪ ಸಿಂಹ ಅವರು ಟ್ವೀಟ್ ಮಾಡಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ.