ನ್ಯೂಸ್ ನಾಟೌಟ್: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಭಾನುವಾರ ಮುಂಜಾನೆ ನಸುಕಿನ ವೇಳೆ ಓಮ್ನಿ ಕಾರು ಹೆದ್ದಾರಿಯ ತಡೆಬೇಲಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ 85ರ ವೃದ್ಧೆಯೋರ್ವರ ದೇಹ ಛಿದ್ರಗೊಂಡು ಮೃತಪಟ್ಟಿದ ಘಟನೆ ನಡೆದಿದೆ.
ಮೃತ ವೃದ್ಧೆಯನ್ನು ಕಾಸರಗೋಡು ಜಿಲ್ಲೆಯ ಕುಂಜತ್ತೂರು ನಿವಾಸಿ ಬಿ.ಫಾತಿಮಾ ಎಂದು ಗುರುತಿಸಲಾಗಿದೆ. ಫಾತಿಮಾ ಅವರ ಪುತ್ರ ಮೂಸ (50) ಮೊಮ್ಮಗ ಮುಸ್ತಫಾ(24) ಜತೆ ನಿನ್ನೆ ಮಂಗಳೂರಿನ ಅಡ್ಡೂರಿಗೆ ತೆರಳಿ ಸಂಬಂಧಿಕರೋರ್ವರ ಶವಸಂಸ್ಕಾರವೊಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದರು. ಈ ವೇಳೆ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.
ಫಾತಿಮಾ ಓಮ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದು, ಮೊಮ್ಮಗ ಮುಸ್ತಫಾ ಕಾರು ಚಲಾಯಿಸುತ್ತಿದ್ದರು. ನಿದ್ದೆ ಮಂಪರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹೆದ್ದಾರಿ ಬದಿಯ ತಡೆಬೇಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಸಿಬ್ಬಂದಿ ಮಹೇಶ್ ಆಚಾರ್ಯ ಮತ್ತು ವಿಠ್ಠಲ್ ದಾಸ್ ಅವರು ಕಬ್ಬಿಣದ ಸಲಾಕೆ ಎಡೆಯಲ್ಲಿ ಸಿಲುಕಿ ಛಿದ್ರಗೊಂಡಿದ್ದ ಫಾತಿಮಾರನ್ನು ಹೊರಗೆಳೆದು ರಕ್ತದ ಮಡುವಲ್ಲಿದ್ದ ಮೂವರನ್ನು ತಮ್ಮ ಇಲಾಖಾ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.