ನ್ಯೂಸ್ ನಾಟೌಟ್ : ಗೆಲ್ಲಬೇಕೆಂಬ ಆಸೆಯಿಂದ, ಮತದಾರರ ಕರುಣೆ ಸಂಪಾದಿಸುವ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿಯೊಬ್ಬರು ತಮ್ಮ ಕಿಡ್ನ್ಯಾಪ್ ಪ್ರಕರಣವನ್ನು ತಾವೇ ಸೃಷ್ಟಿಲು ತಯಾರಿ ನಡೆಸಿದ್ದು ರಹಸ್ಯ ಕ್ಯಾಮರಾದ ವಿಡಿಯೋ ಮೂಲಕ ಬುಧವಾರ ವಿಷಯ ಬಯಲಾಗಿದೆ.
ಗೆಲ್ಲಲೇಬೇಕೆಂಬ ಆಸೆಯಿಂದ ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಭರ್ಜರಿ ನಾಟಕಕ್ಕೆ ತಯಾರಿ ಮಾಡಿ ತನ್ನ ಸಂಗಡಿಗರೊಂದಿಗೆ ಮೀಟಿಂಗ್ ಮಾಡಿದ್ದಾರೆ. ಆ ಮೀಟಿಂಗ್ ನಲ್ಲಿದ್ದ ಒಬ್ಬಾತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ರಿಲೀಸ್ ಆಗಿರುವ 17 ನಿಮಿಷದ ವಿಡಿಯೋ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋ ಮುಖಾಂತರ ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಜೆಡಿಎಸ್ ಅಭ್ಯರ್ಥಿ ಮುನೇಗೌಡ ತಾವೇ ತಮ್ಮ ಹುಡುಗರಿಂದ ಕಿಡ್ನಾಪ್ ಮಾಡಿಸಿಕೊಂಡು ಅದನ್ನು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ತಲೆಗೆ ಕಟ್ಟಲು ಸಂಚು ನಡೆಸಿದ್ದರು ಎಂದು ದೂರಿದೆ.
ನಕಲಿ ಕಿಡ್ನಾಪ್ ನಾಟಕವಾಡಿ, ಅಪಹರಣದ ನಂತರ ಹೊಸೂರು ರಸ್ತೆಯ ಫಾರ್ಮ್ ಹೌಸ್ನಲ್ಲಿ ಎರಡು ಮೂರು ದಿನ ಉಳಿದುಕೊಳ್ಳುವ ಯೋಜನೆ ಬಗ್ಗೆ ಚರ್ಚಿಸಲಾಗಿದೆ. ಕಿಡ್ನಾಪ್ ಆದ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುವುದು ಸೇರಿದಂತೆ ಹಲವು ತಂತ್ರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ.
ಬಳಿಕ 7ರಂದು ಜೆಡಿಎಸ್ ಸಮಾವೇಶಕ್ಕೆ ಗೈರು ಹಾಜರಾಗುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ಲ್ಯಾನ್ ಸಹ ಮಾಡಲಾಗಿತ್ತು ಎಂದು ವಿಡಿಯೋದಲ್ಲಿ ಬಹಿರಂಗವಾಗಿದೆ. ಜೊತೆಗೆ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಮುನೇಗೌಡರ ಪತ್ನಿ ಹಾಗೂ ಭಾವಮೈದುನನನ್ನು ಪ್ರಚಾರಕ್ಕೆ ಕಳುಹಿಸಿ ತಮ್ಮವರಿಂದಲೇ ಅವರಿಗೆ ಹಲ್ಲೆ ಮಾಡಿಸಿ ಬಳಿಕ ಅದನ್ನು ಬಿಜೆಪಿಗರ ತಲೆಗೆ ಕಟ್ಟುವ ಬಗ್ಗೆ ಸಹ ಮಾತುಕತೆ ಈ ವಿಡಿಯೋದಲ್ಲಿದೆ ಎಂದು ವರದಿ ತಿಳಿಸಿದೆ.