ನ್ಯೂಸ್ ನಾಟೌಟ್: ಮನೆಗೆ ನುಗ್ಗಿದ ಐವರು ಅಪರಿಚಿತರು ಸಿನಿಮೀಯ ರೀತಿಯಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯ ಪೋಷಕರನ್ನು ಬರ್ಬರವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಆರೋಪಿಗಳು ಮಷಿನ್ ಕ್ರಷರ್ನ ಬೆಲ್ಟ್ಗಳನ್ನು ಬಳಸಿ ಬಾಲಕಿಯ ಕುಟುಂಬಸ್ಥರಿಗೆ ಥಳಿಸಿದ್ದು ಅವರಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಬಾಲಕಿಯ ಕುಟುಂಬಸ್ಥರು ಪ್ರಜ್ಞಾಹೀನರಾಗುತ್ತಿದ್ದಂತೆ ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಆರಂಭದಲ್ಲಿ, ಪೊಲೀಸರು ಆರೋಪಿಗಳ ವಿರುದ್ಧ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದರು. ನಂತರ ಭೀಮ್ ಆರ್ಮಿ ಕಾರ್ಯಕರ್ತನ ಪ್ರತಿಭಟನೆಯ ಕಾರಣದಿಂದ ನಂತರ, ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು ಎನ್ನಲಾಗಿದೆ. ಐದನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ವರದಿ ತಿಳಿಸಿದೆ.
ಈ ಘಟನೆಯು ಹುಡುಗಿಯ ಕುಟುಂಬ ಮತ್ತು ಆರೋಪಿಗಳ ನಡುವಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ಸಂಭವಿಸಿರಬಹುದು ಎಂದು ವರದಿಯಲ್ಲಿ ತಿಳಿಸಿದ್ದು, ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಪ್ರಕಾರ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.