ನ್ಯೂಸ್ ನಾಟೌಟ್ :ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆಯಿದೆ.ಶಾಲೆಯಲ್ಲಿಯೇ ಊಟ ಇದೆಯೆಂದು ನಂಬಿ ಮಕ್ಕಳಿಗೆ ಊಟದ ಬಾಕ್ಸನ್ನು ಪೋಷಕರು ಕೊಟ್ಟು ಕಳುಹಿಸುತ್ತಿಲ್ಲ.ಆದರೆ ಯಾರದ್ದೋ ಭೇಜವಾಬ್ದಾರಿಯಿಂದ ಮಕ್ಕಳು ಬಲಿಪಶು ಅನ್ನೋ ಹಾಗೆ,ಹಾವು ಬಿದ್ದಿರುವ ಅನ್ನ ತಿಂದು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ವರದಿಯಾಗಿದೆ.
ಶಾಲಾ ಬಿಸಿಯೂಟದಲ್ಲಿ ಹಾವು ಪತ್ತೆಯಾಗಿ 150ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.ಫೋರ್ಬೆಸ್ಗಂಜ್ನ ಸರ್ಕಾರಿ ಶಾಲೆಯೊಂದರಲ್ಲಿ ಶನಿವಾರ ಮಕ್ಕಳಿಗೆ ಬಡಿಸಲಾಗಿದ್ದ ಮಧ್ಯಾಹ್ನದ ಊಟದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಕೋಲಾಹಲವೇ ಸೃಷ್ಟಿಯಾಗಿತ್ತು. ಶಾಲೆಯಲ್ಲಿ ತಕ್ಷಣ ಊಟದ ವಿತರಣೆಯನ್ನು ನಿಲ್ಲಿಸಿದರೂ, ಅದಾಗಲೇ ಆಹಾರವನ್ನು ತಿಂದಿದ್ದ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು.ತಕ್ಷಣವೇ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಎಸ್ಡಿಎಂ, ಎಸ್ಡಿಒ ಮತ್ತು ಡಿಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಈ ಕುರಿತು ಮಾಹಿತಿ ಪಡೆದರು.