ನ್ಯೂಸ್ ನಾಟೌಟ್: ಮೇ 3ರಂದು ಕರಾವಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಮೂಲ್ಕಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಮೋದಿ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ಸಕಲ ಸಿದ್ಧತಾ ಕಾರ್ಯಕ್ರಮಗಳನ್ನು ನಡೆಸಿದೆ.
ಮೂಲ್ಕಿಯಲ್ಲಿ ವಿಶಾಲವಾದ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಮೋದಿ ಸಮಾವೇಶಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕರಾವಳಿ ಜಿಲ್ಲೆಗಳ ವಿವಿಧ ಪ್ರದೇಶಗಳಿಂದ ಆಗಮಿಸುವ ವಾಹನಗಳ ನಿಲುಗಡೆಗೆ ವಿಶಾಲವಾದ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಆಗಮಿಸುವ ಜನರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.
ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ಮೂಲ್ಕಿ ಕೊಲ್ನಾಡಿನ ಗುಂಡಾಲು ಪ್ರದೇಶದಲ್ಲಿ 25 ಎಕರೆಗೂ ಅಧಿಕ ವಿಸ್ತಾರದ ಮೈದಾನದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಮೇ 3ರಂದು ಬೆಳಗ್ಗೆ 10ರಿಂದ 10.30ರ ಸಮಯದಲ್ಲಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಮೂಲ್ಕಿಗೆ ಬಂದಿಳಿಯಲಿದ್ದಾರೆ. ಈ ಹಿಂದೆ ಕೃಷಿ ಮೇಳ ನಡೆದಿರುವ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಮೋದಿಯವರು ಆಗಮಿಸಿದ ಕೂಡಲೇ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.
ಈ ಸಮಾವೇಶಕ್ಕೆ ನಾನಾ ಕಡೆಗಳಿಂದ ಸುಮಾರು 2-3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಬೆಳಗ್ಗೆ 9 ಗಂಟೆಯೊಳಗೆ ಜನರು ಇಲ್ಲಿ ಬಂದು ಸೇರಬೇಕಾಗಿದೆ. ಉಡುಪಿ, ಮಂಗಳೂರು, ಮೂಡುಬಿದಿರೆ ಕಡೆಗಳಿಂದ ಆಗಮಿಸುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸಭಾಂಗಣದ ಸಮಗ್ರ ನಿರ್ವಹಣೆ ಹೊಣೆಯನ್ನು ಬೆಂಗಳೂರಿನ ಅಫ್ಲುಯೆನ್ಸ್ ಈವೆಂಟ್ಸ್ ಸಂಸ್ಥೆಗೆ ವಹಿಸಲಾಗಿದೆ. ಸಭಾಂಗಣದಲ್ಲಿ ಸುಮಾರು ಒಂದೂವರೆ ಲಕ್ಷ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಟ್ಟು 3 ಲಕ್ಷ ಜನರಿಗೆ ಬೇಕಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರಧಾನಿ ಮೋದಿ ಮಾತನಾಡಲಿರುವ ವೇದಿಕೆಯನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಜರ್ಮನ್ ಪೆಂಡಾಲ್, ಹ್ಯಾಂಗರ್ ಮೂಲಕ ವೇದಿಕೆ ನಿರ್ಮಾಣವಾಗುತ್ತಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 13 ಕ್ಷೇತ್ರಗಳಲ್ಲೂ ಬಿಜೆಪಿಯ ಭರ್ಜರಿ ಗೆಲುವು ನಿಶ್ಚಿತ. ಪ್ರಧಾನಿಯವರ ಸಾರ್ವಜನಿಕ ಸಮಾವೇಶಕ್ಕೆ ಮೂಲ್ಕಿಯ ಸಮೀಪದ ವಿಶಾಲ ಮೈದಾನದಲ್ಲಿ ಸುಸಜ್ಜಿತ ಪೆಂಡಾಲ್ ಮತ್ತು ವೇದಿಕೆ ನಿರ್ಮಾಣವಾಗುತ್ತಿದೆ. ಲಕ್ಷಾಂತರ ಜನರು ಈ ಐತಿಹಾಸಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಡೆಯಿಂದ ಆಗಮಿಸುವ ಕಾರ್ಯಕರ್ತರು, ಬೆಂಬಲಿಗರ ವಾಹನಗಳ ನಿಲುಗಡೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
| ಸುದರ್ಶನ್ ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರು