ನ್ಯೂಸ್ ನಾಟೌಟ್ : ಬಾಳ ಸಂಗಾತಿಯನ್ನು ಹುಡುಕುವ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಹಲವು ವಂಚನೆಯ ಪ್ರಕರಣಗಳು ನಡೆದಿವೆ. ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಇದೇ ಸೈಟ್ನಲ್ಲಿ ಪರಿಚಯವಾಗಿದ್ದ ಮಹಿಳೆಯನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಸೈಬರ್ ಅಪರಾಧಿಗಳ ವಂಚನೆಯ ಬಲೆಗೆ ಸಿಲುಕಿ ಹಣ ಕಳೆದುಕೊಂಡ ಮಾರತ್ತಹಳ್ಳಿಯ 48 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಪೊಲೀಸ್ ಠಾಣೆಯನ್ನು ತಮ್ಮ ದೂರು ದಾಖಲಿಸಿದ್ದಾರೆ.
ಮಾರತ್ತಹಳ್ಳಿ ಸಮೀಪದ ಮುನ್ನೆಕೊಲ್ಲಲ್ ನಿವಾಸಿಯಾಗಿದ್ದ ಈತ ಈ ಸೈಟ್ನಲ್ಲಿ ತನ್ನ ಪ್ರೊಫೈಲ್ ಅಪ್ಲೋಡ್ ಮಾಡಿದ್ದ. ಈ ಸೈಟ್ನಲ್ಲಿ ಫಾತಿಮಾ ಮುಹಮ್ಮದ್ ಎಂಬ ಖಾತೆಯಿಂದ ಏಪ್ರಿಲ್ ಮೊದಲ ವಾರದಲ್ಲಿ ಆತನನ್ನು ಸಂಪರ್ಕಿಸಲಾಗಿದೆ. ತಾನು ಲಂಡನ್ನಲ್ಲಿ ನೆಲೆಸಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಳು.
ಹೀಗೆ ಪರಿಚಯ ಮಾಡಿಕೊಂಡ ಫಾತಿಮಾ, ಸಲ್ಮಾನ್ ಮೇಲೆ ಆಸಕ್ತಿಯನ್ನು ತೋರಿದ್ದಾಳೆ. ಹೀಗೆ ಪರಸ್ಪರ ಮಾತುಕತೆ ನಡೆಯುತ್ತಿದ್ದಾಗ ಸಲ್ಮಾನ್ಗೆ ಏಪ್ರಿಲ್ 11ರಂದು ಮಹಿಳೆಯೊಬ್ಬರು ಕರೆ ಮಾಡಿ ತಾನು ಕಸ್ಟಮ್ಸ್ ಅಧಿಕಾರಿ ಮನಿಷಾ ಶರ್ಮಾ ಎಂದು ಪರಿಚಯಿಸಿಕೊಂಡಿದ್ದರು. ಫಾತಿಮಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು 5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿದೇಶಿ ಕರೆನ್ಸಿಯನ್ನು ತಂದಿದ್ದರು ಮತ್ತು ಕಸ್ಟಮ್ಸ್ ಅಧಿಕಾರಿಗಳು ಅದನ್ನು ಅವರ ಕೆಲವು ದಾಖಲೆಗಳೊಂದಿಗೆ ವಶಪಡಿಸಿಕೊಂಡಿದ್ದಾರೆ ಎಂದು ಮನಿಷಾ ಈತನಿಗೆ ತಿಳಿಸಿದ್ದಾರೆ.
ಮನಿಷಾ ತನ್ನ ಹಣ ಮತ್ತು ಕಾಗದಪತ್ರಗಳನ್ನು ಬಿಡುಗಡೆ ಮಾಡಲು ತನ್ನ ಪರವಾಗಿ ಶುಲ್ಕ ಮತ್ತು ತೆರಿಗೆಗಳನ್ನು ಪಾವತಿಸುವಂತೆ ಈತನಿಗೆ ಆಕೆ ಸೂಚಿಸಿದ್ದಾಳೆ. ಅದರಂತೆ ಸಲ್ಮಾನ್ ಒಟ್ಟು 34,40,700 ರೂ.ಗಳನ್ನು ಮಹಿಳೆ ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ ಏಪ್ರಿಲ್ 19ರಿಂದ ಮನಿಷಾ ಆಗಲಿ ಅಥವಾ ಫಾತಿಮಾ ಆಗಲಿ ಸಂಪರ್ಕಕ್ಕೆ ಸಿಗಲಿಲ್ಲ.