ನ್ಯೂಸ್ ನಾಟೌಟ್ : ಮಗಳ ಮದುವೆಯ ಮುಂಚಿನ ದಿನ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕತ್ತು ಇಸುಕಿ ಕೊಲೆ ಮಾಡಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಇಂದು (ಬುಧವಾರ) ನಸುಕಿನ ಜಾವ ನಡೆದ ಘಟನೆ ನಡೆದಿದೆ.
38 ವರ್ಷದ ಲಕ್ಷ್ಮಿ ಕೊಲೆಯಾದ ದುರ್ದೈವಿಯಾಗಿದ್ದು, ಪತಿ ನಿಂಗಪ್ಪ ಪತ್ನಿಯನ್ನು ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಕಲಹ ಹಿನ್ನಲೆ ಗಂಡ-ಹೆಂಡತಿ ಬೇರೆ ಕಡೆ ವಾಸವಾಗಿದ್ದರು, ಈ ನಡುವೆ ಲಕ್ಷ್ಮಿ ಹಾಗೂ ನಿಂಗಪ್ಪ ದಂಪತಿಯ ಎರಡನೇ ಮಗಳಾದ ಕಾವೇರಿಯ ಮದುವೆ ನಿಗದಿ ಮಾಡಲಾಗಿತ್ತು. ನಾಳೆ ಶಹಾಪುರ ತಾಲೂಕಿನ ದರಿಯಾಪುರ ಗ್ರಾಮದಲ್ಲಿ ಮದುವೆ ನಿಗದಿಯಾಗಿತ್ತು.
ಮಗಳ ಮದುವೆ ಹಿನ್ನಲೆ ಪತ್ನಿ ವಾಸವಿದ್ದ ಮನೆಗೆ ಬಂದಿದ್ದ ಪತಿರಾಯ ನಿಂಗಪ್ಪ, ಮಗಳ ಮದುವೆ ಮಾಡುವುದು ಬೇಡ ನೀ ಹೇಗೆ ಮಾಡುತ್ತಿಯೋ ನೊಡೋಣಾ ಎಂದು ಹೆಂಡತಿಯೊಂದಿಗೆ ಜಗಳ ಮಾಡಿದ್ದಾರೆ. ಆ ಬಳಿಕ ಮನೆ ಹಿಂಭಾಗದಲ್ಲಿ ದಂಪತಿಗಳಿಬ್ಬರು ಮಲಗಿದ್ದರು ಎನ್ನಲಾಗಿದೆ. ಇಂದು ನಸುಕಿನ ಜಾವ ನಿದ್ದೆಗೆ ಜಾರಿದ್ದ ಪತ್ನಿಯ ಕತ್ತು ಹಿಸುಕಿ ಪತಿರಾಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಹೆಂಡತಿಯನ್ನು ಕೊಲೆಗೈದ ಬಳಿಕ ಮನೆಯಿಂದ ಹೊರ ಬಂದಿದ್ದ ಆರೋಪಿ ನೇರ ಶಹಾಪುರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದರಂತೆ. ಘಟನೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ, ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.