ನ್ಯೂಸ್ನಾಟೌಟ್: ವಿವಿಧ ಭರವಸೆ, ಗ್ಯಾರೆಂಟಿಗಳ ಆಮಿಷವೊಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜನ ಸಾಮಾನ್ಯರು ಅಧಿಕಾರಿಗಳ ನಡುವೆ ವಾಗ್ವಾದ ನೂತನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಗ್ಯಾರೆಂಟಿಗಳನ್ನು ಕೆಲವೇ ಗಂಟೆಗಳಲ್ಲಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರೂ ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಇದರ ಪರಿಣಾಮ ವಿದ್ಯುತ್ ಬಿಲ್ ವಿಚಾರದಲ್ಲಿ ಲೈನ್ಮ್ಯಾನ್ ಮತ್ತು ಜನಸಾಮಾನ್ಯರ ನಡುವೆ ಜಟಾಪಟಿಗಳು ನಡೆಯುತ್ತಿದೆ. ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ಎಂದು ಕಾಂಗ್ರೆಸ್ ಹೇಳಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹಲವೆಡೆ ಜನರು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಲೈನ್ಮ್ಯಾನ್ಗಳ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ.
ಇಷ್ಟು ದಿನ ಕೇವಲ ಬಾಯಿ ಮಾತಿನಲ್ಲೇ ನಡೆಯುತ್ತಿದ್ದ ಜಗಳ ಇದೀಗ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಹಂತಕ್ಕೆ ತಲುಪಿದೆ. ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಬಂದ ಲೈನ್ಮ್ಯಾನ್ ಮೇಲೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ಕಳೆದ ಆರು ತಿಂಗಳಿನಿಂದ ಚಂದ್ರಶೇಖರಯ್ಯ ಎಂಬುವವರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಲ್ ವಸೂಲಾತಿಗೆಂದು ಅವರ ಮನೆಗೆ ಲೈನ್ಮ್ಯಾನ್ ಮಂಜುನಾಥ್ ಎಂಬುವರು ತೆರಳಿದ್ದರು. ಈ ಸಂದರ್ಭ ಗ್ರಾಹಕ ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟುವುದಿಲ್ಲ. ವಿದ್ಯುತ್ ಉಚಿತ ಅಂತ ಹೇಳಿದ್ದಾರೆ ಎಂದು ವಾಗ್ವಾದಕ್ಕೆ ಇಳಿದಿದ್ದಾನೆ. ಸರ್ಕಾರ ಇನ್ನು ಅಧಿಕೃತವಾಗಿ ಜಾರಿ ಮಾಡಿಲ್ಲ. ಜಾರಿಯಾದ ಬಳಿಕ ಬಿಲ್ ಕಟ್ಟಬೇಡಿ. ಸದ್ಯಕ್ಕೆ ಹಳೆಯ ಬಿಲ್ ಪಾವತಿಸಿ ಎಂದು ಮಂಜುನಾಥ್ ಕೇಳಿದ್ದಾರೆ. ಆದರೆ, ಬಿಲ್ ಕಟ್ಟಲು ಒಪ್ಪದ ಚಂದ್ರಶೇಖರಯ್ಯ, ಅವಾಚ್ಯ ಶಬ್ದಗಳಿಂದ ಮಂಜುನಾಥ್ ಅವರನ್ನು ನಿಂದಿಸಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಂಜುನಾಥ್ ಮೇಲೆ ಚಂದ್ರಶೇಖರಯ್ಯ ಚಪ್ಪಲಿಯಿಂದ ಹಲ್ಲೆ ಮಾಡಿ, ದುರ್ವರ್ತನೆ ತೋರಿದ್ದಾರೆ. ಹಲ್ಲೆ ನಡೆಸಿದ ಚಂದ್ರಶೇಖರಯ್ಯ ವಿರುದ್ಧ ಮಂಜುನಾಥ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.