ನ್ಯೂಸ್ ನಾಟೌಟ್ : ಮಳೆಗಾಲ ಆರಂಭದಲ್ಲಿಯೇ ಕೊಡಗಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ.ವರ್ಷಂಪ್ರತಿ ಮಳೆಗಾಲದಲ್ಲಿ ಈ ಭಾಗದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದವು.ಇದೀಗ ಜಿಲ್ಲಾಡಳಿತ ಒಂದು ವರದಿಯನ್ನು ನೀಡಿದ್ದು,ವರದಿ ಪ್ರಕಾರ ಕೊಡಗಿನ 90 ಗ್ರಾಮಗಳಿಗೆ ಈ ವರ್ಷ ಕಂಟಕ ಎದುರಾಗಲಿವೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಸಾಂದರ್ಭಿಕ ಚಿತ್ರ
ಮುಖ್ಯಮಂತ್ರಿ ಜತೆಗೆ ನಡೆಸಲಾದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಳೆ ಹಾಗೂ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಕೊಡಗು ಜಿಲ್ಲಾಡಳಿತ ಈ ಮಾಹಿತಿ ನೀಡಿದೆ. ಅದರಲ್ಲಿ 45ಕ್ಕೂ ಹೆಚ್ಚು ಗ್ರಾಮಗಳಿಗೆ ಭೂಕುಸಿತ, 40ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಆತಂಕವಿದೆ ಎಂಬ ಅಂಶ ತಿಳಿದು ಬಂದಿದೆ.
ಕೊಡಗಿನ ಮಡಿಕೇರಿ ತಾಲ್ಲೂಕಿನ ತಾವೂರು, ತಣ್ಣಿಮಾನಿ, ಪದಕಲ್ಲು, ಕಡಿಯತ್ತೂರು, ಚರಿಯಪರಂಬು, ಬಲಮುರಿ, ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಮಾದಪಟ್ಟಣ, ನೆಲ್ಯಹುದಿಕೇರಿ, ಕಣಿವೆ, ಕೂಡಿಗೆ ಮುಂತಾದ 40 ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಭೀತಿಯಿದೆ ಎಂದು ವರದಿ ಹೇಳಿದೆ.
ಮಡಿಕೇರಿ ತಾಲ್ಲೂಕಿನ ಸಂಪಾಜೆ, ಮದೆ, ಭಾಗಮಂಡಲ, ಚೇರಂಗಾಲ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟಗೇರಿ, ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು, ಐಗೂರು, ತಾಕೇರಿ, ಕಿರಗಂದೂರು, ಬಿಳಿಗೇರಿ, ಶಾಂತಳ್ಳಿ ಸೇರಿದಂತೆ ಒಟ್ಟು 45ಕ್ಕೂ ಅಧಿಕ ಗ್ರಾಮಗಳಲ್ಲಿ ಭೂ ಕುಸಿತದ ಆತಂಕವಿದೆ ಎಂದು ಹೇಳಲಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪ್ರವಾಹದ ಭೀತಿ ಎದುರಿಸುವ ಕೆಲ ಪ್ರದೇಶದ ಜನರನ್ನು ಸ್ಥಳಾಂತರಿಸಬೇಕೆಂದು ಜಿಲ್ಲಾಡಳಿತ ವರದಿ ಮಾಡಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 765 ಕುಟುಂಬಗಳ 2681 ಜನರನ್ನು, 26 ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಬೇಕು ಎಂದು ಹೇಳಿದೆ. ಇತ್ತ ಸೋಮವಾರಪೇಟೆ ತಾಲ್ಲೂಕಿನಲ್ಲಿ 1143 ಕುಟುಂಬಗಳ 4162 ಜನರನ್ನು, 30 ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಬೇಕು ಎಂದು ಹೇಳಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 582 ಕುಟುಂಬಗಳ 2049 ಜನರನ್ನು 26 ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಬೇಕು ಎಂದು ಜಿಲ್ಲಾಡಳಿತ ವರದಿ ನೀಡಿದೆ.