ನ್ಯೂಸ್ ನಾಟೌಟ್ : ಬಜರಂಗ ದಳ,ಆರೆಸ್ಸೆಸ್ ವಿಷಯಕ್ಕೆ ಕೈ ಹಾಕಿದರೆ ಕಾಂಗ್ರೆಸ್ಸೇ ಇರಲ್ಲ. ಮಾತ್ರವಲ್ಲ ಸಿದ್ದರಾಮಯ್ಯ ಅವರ ರಾಜಕೀಯವೇ ಅಂತ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುಡುಗಿದ್ದಾರೆ.
ಬಜರಂಗ ದಳ ಮತ್ತು ಆರ್.ಎಸ್.ಎಸ್ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶುಕ್ರವಾರ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಆರ್.ಎಸ್.ಎಸ್ ಬಗ್ಗೆ ಅವರಿಗೇನು ಗೊತ್ತು.ಆರ್ ಎಸ್ . ಎಸ್. ಈ ದೇಶದಲ್ಲಿ ರಾಷ್ಟ್ರ ಭಕ್ತಿ ಕಲಿಸಿದೆ. ಈ ದೇಶ ನಡೆಸುವ ಪ್ರಧಾನ ಮಂತ್ರಿ ಆರ್.ಎಸ್.ಎಸ್ ಸ್ವಯಂ ಸೇವಕ . ನಾವೆಲ್ಲರೂ ಆರ್.ಎಸ್.ಎಸ್ ಸ್ವಯಂ ಸೇವಕರು ಎಂದು ಹೇಳಿದರು. ಜವಾಹರ ಲಾಲ್ ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ನಿಷೇಧದ ಪ್ರಯತ್ನ ಮಾಡಿದಾಗಲೆಲ್ಲಾ ದೇಶದಲ್ಲಿ ಕಾಂಗ್ರೆಸ್ ಸೋತಿದೆ. ಬಜರಂಗ ದಳ, ಆರ್.ಎಸ್.ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ, ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತದೆ ಎಂದು ನಳಿನ್ ಕುಮಾರ್ ಸಿಡಿದಿದ್ದಾರೆ.
ರಾಜ್ಯವನ್ನು ದ್ವೇಷ, ವಿಭಜನೆ ಮೂಲಕ ಆಳ್ವಿಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇವರ ಮಂತ್ರಿ ಮಂಡಲದ ಗಲಾಟೆಯಲ್ಲೇ ಕಾಂಗ್ರೆಸ್ ವಿಭಜನೆ ಆಗುತ್ತದೆ.ಕಾಂಗ್ರೆಸ್ ಗೂಂಡಾಗಿರಿ ಹಾಗೂ ದ್ವೇಷದ ರಾಜಕಾರಣದ ಮೂಲಕ ವಿರೋಧ ಪಕ್ಷವನ್ನು ಮೆಟ್ಟಿ ನಿಲ್ಲಬಹುದು ಅಂದುಕೊಂಡಿದೆ. ಸಿದ್ದರಾಮಯ್ಯರ ತಾತಾ ಮುತ್ತಾತನೂ ಈ ಕೆಲಸ ಮಾಡಿ ಯಶಸ್ವಿಯಾಗಿಲ್ಲ ಎಂದು ಹೇಳಿದರು.ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ತಾಕತ್ತು ಇದ್ದರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಲಿ. ಕಾಂಗ್ರೆಸ್ನ ಮೆರವಣಿಗೆ, ವಿಜಯೋತ್ಸವ, ಸಭೆಗಳಲ್ಲೇ ಪಾಕಿಸ್ತಾನ ಪರ ಘೋಷಣೆ ಬಂದಿದೆ. ಅವರನ್ನು ಬಂಧಿಸಲಿ. ಅದು ಬಿಟ್ಟು ರಾಜ್ಯವನ್ನು ವಿಭಜನಾವಾದದ ಮೂಲಕ ಕಟ್ಟುವ ಪ್ರಯತ್ನ ಬೇಡ ಎಂದು ಹೇಳಿದರು.