ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಹುಲಿಗಳು ಇತರ ಪ್ರಾಣಿಗಳ ಮೇಲೆ ದಾಳಿ ನಡೆಸುವುದೇ ಹೆಚ್ಚು.ಆದರೆ ಇಲ್ಲೊಂದು ವಿಡಿಯೋದಲ್ಲಿ ಹುಲಿ ಕಾಡಾನೆಗಳನ್ನು ನೋಡಿ ಅವುಗಳಿಗೆ ದಾರಿ ಮಾಡಿ ಕೊಟ್ಟಿದೆ.ಪ್ರಾಣಿಗಳಲ್ಲೂ ಅದ್ಭುತ ಹೊಂದಾಣಿಕೆಯ ಮನೋಭಾವ ಇದೆ ಎಂಬುದಕ್ಕೆ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿಯಾಗಿದೆ.
ಏನಿದು ಘಟನೆ?
ವಿಡಿಯೋದಲ್ಲಿ ದಾರಿಯಲ್ಲಿ ಸಾಗುತ್ತಿದ್ದ ಹುಲಿಯೊಂದು ಆನೆಯ ಹಿಂಡು ಬರುತ್ತಿರುವುದನ್ನು ಗಮನಿಸಿದೆ. ತಕ್ಷಣವೇ ಅದು ಉದ್ದನೆಯ ಹುಲ್ಲುಗಳ ಮೇಲೆ ಕುಳಿತು, ಆನೆಗಳಿಗೆ ಹೋಗಲು ದಾರಿ ಮಾಡಿ ಕೊಟ್ಟಿರುವುದು ವಿಶೇಷವೆಂಬಂತಿದೆ. ವಿಡಿಯೋ ನೋಡೋ ಹೊತ್ತಿಗೆ ಹುಲಿ ಮರೆಯಲ್ಲಿ ನಿಂತು ಆನೆಗಳ ಮೇಲೆ ದಾಳಿ ಮಾಡುತ್ತೇನೋ ಅನ್ಸುತ್ತೆ.ಆದರೆ ಹುಲಿ ಹಾಗೆ ಮಾಡದೇ ಅವುಗಳಿಗೆ ತಿಳಿಯದ ಹಾಗೆ ಮರೆಯಲ್ಲಿ ಕುಳಿತು ಆನೆಗಳ ಹಿಂಡು ಹೋಗುವಲ್ಲಿಯವರೆಗೆ ಕಾದು ಕುಳಿತಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತಾ ನಂದಾ ಅವರು ಟ್ವೀಟರ್ ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಜೇತಾ ಸಿಂಹ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ನೂರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ ಪ್ರಾಣಿಗಳು ಕೂಡಾ ಹೇಗೆ ಸಂವಹನ ನಡೆಸುತ್ತವೆ ಮತ್ತು ಸಾಮರಸ್ಯ ಕಾಪಾಡಿಕೊಳ್ಳುತ್ತವೆ…ಎಂಬುದನ್ನು ಗಮನಿಸಿ..ಆನೆಗಳ ಹಿಂಡು ಬರುತ್ತಿರುವುದನ್ನು ಅರಿತ ಹುಲಿ ಆನೆ ಹಿಂಡು ಹೋಗಲು ದಾರಿ ಮಾಡಿಕೊಟ್ಟಿದೆ.” ಎಂದು ನಂದಾ ಕ್ಯಾಪ್ಶನ್ ನೀಡಿದ್ದಾರೆ.ಇದು ಎರಡು ವನ್ಯ ಮೃಗಗಳ ನಡುವಿನ ಪರಸ್ಪರ ಗೌರವ ಮತ್ತು ತಿಳಿವಳಿಕೆಯ ವಿಶಿಷ್ಟ ಪ್ರದರ್ಶನವಾಗಿದೆ. ಇದು ಪ್ರಕೃತಿ ಜೀವನದ ಸಾಮರಸ್ಯವಾಗಿದೆ ಎಂದು ವರದಿ ತಿಳಿಸಿದೆ.