ನ್ಯೂಸ್ ನಾಟೌಟ್ :ಇಷ್ಟು ದಿನ ಮತಪ್ರಚಾರ,ರೋಡ್ ಶೋ,ಚುನಾವಣಾ ಕದನ ಅಂತೆಲ್ಲಾ ಕೇಳುತ್ತಿದ್ದ ಕಿವಿಗಳು ಇನ್ಮುಂದೆ ಮತದಾನ ಹಾಗೂ ಎಲೆಕ್ಷನ್ ರಿಸಲ್ಟ್ ನ್ನು ಕೇಳಲು ಸಿದ್ಧವಾಗಿದೆ.ಇದೀಗ ಎಲ್ಲರ ಚಿತ್ತ ಮತದಾನದತ್ತ ಹೊರಟಿದೆ.ಹೌದು, ನಾಳೆ ದಿನ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಇದಕ್ಕಾಗಿ ಕೆಲದಿನಗಳಿಂದ ಸಿದ್ಧತೆಗಳು ನಡೆಯುತ್ತಿದ್ದು, ಇದೀಗ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಳೆ ದಿನ ರಾಜ್ಯದ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಮತದಾರರ ಒಲವು ಯಾರ ಕಡೆಗಿರಲಿದೆ?ಯಾರು ಅಧಿಕಾರದ ಗದ್ದುಗೆಯನ್ನು ಹಿಡಿಯಲಿದ್ದಾರೆ ಎಂಬುದನ್ನು ನಾಳೆ ದಿನ ಮತದಾರ ಪ್ರಭುಗಳು ಉತ್ತರ ನೀಡಲಿದ್ದಾರೆ.
ವಿಧಾನಸಭೆ ಚುನಾವಣೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಸಿಬ್ಬಂದಿ ನಿಯೋಜನೆ ಮತಗಟ್ಟೆಗಳಲ್ಲಿ ಸಿದ್ಧತೆಗಳು, ಭದ್ರತಾ ನಿಯೋಜನೆ ಕಾರ್ಯಗಳು ಭರದಿಂದ ಸಾಗುತ್ತಿದೆ. ಕರ್ನಾಟಕ ಚುನಾವಣಾ ಕಣದಲ್ಲಿ 2615 ಅಭ್ಯರ್ಥಿಗಳು ಇದ್ದು, ಈ ಪೈಕಿ ಪುರುಷರು 2430 ಹಾಗೂ ಮಹಿಳಾ ಅಭ್ಯರ್ಥಿಗಳು 184 ಮಂದಿ ಇದ್ದಾರೆ. ಓರ್ವ ತೃತಿಯ ಲಿಂಗಿ ಕೂಡಾ ಕಣದಲ್ಲಿದ್ದಾರೆ.ರಾಜ್ಯದಲ್ಲಿ ಒಟ್ಟು 5, 31,33,054 ಕೋಟಿ ಮತದಾರರಿದ್ದು,ಈ ಬಾರಿ 11, 71,558 ಯುವ ಮತದಾರರು ಇದ್ದಾರೆ. ಈ ಪೈಕಿ 2,67,28,053 ಕೋಟಿ ಪುರುಷ ಹಾಗೂ 2,64,00,074 ಕೋಟಿ ಮಹಿಳಾ ಮತದಾರರಿದ್ದಾರೆ.ಒಟ್ಟು ಮತದಾರರ ಪೈಕಿ 4,92,85,247 ಮತದಾರರಿಗೆ ಮತದಾರರ ಚೀಟಿ ವಿತರಿಸಲಾಗಿದೆ.
ಇನ್ನು ರಾಜ್ಯದಲ್ಲಿರುವ ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಸಕ್ರೀಯ ಮತಗಟ್ಟೆ ಕೇಂದ್ರಗಳು- 58,282, ಹೆಚ್ಚುವರಿ ಮತಗಟ್ಟೆ ಕೇಂದ್ರಗಳು- 263 ಒಳಗೊಂಡು ಒಟ್ಟು – 58,545 ಮತಗಟ್ಟೆಗಳು ಇವೆ. ನಾಳೆ ದಿನ ಮತದಾರರು ಸಾಲುಗಟ್ಟಿ ನಿಲ್ಲುವ ಸಂಭವನೀಯತೆ ಜಾಸ್ತಿ ಇರೋದ್ರಿಂದ ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ.