ನ್ಯೂಸ್ ನಾಟೌಟ್ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಮ್ಮಕ್ಕಿನಿಂದಾಗಿ ಅವರ ಅನುಯಾಯಿಗಳು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿಯವರ ಅನುಯಾಯಿಗಳು ಪರಸ್ಪರ ದ್ವೇಷ ಭಾವನೆ, ವೈಯುಕ್ತಿಕ ತೇಜೋವಧೆ, ಪೂರ್ವಾಗ್ರಹ ಪೀಡಿತ ನಿಂದನೆಗಳಲ್ಲಿ ತೊಡಗಿರುತ್ತಾರೆ. ಬಿಜೆಪಿ ಕಾರ್ಯಕರ್ತ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿಯವರ ಬಗ್ಗೆ ಖಾಸಗಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಯವರು ಮುದ್ರಿತ ವಿಡಿಯೋ ರೆಕಾರ್ಡ್ನ್ನು ಹರಿಯಬಿಟ್ಟಿದ್ದು, ವಿಡಿಯೋದಲ್ಲಿ ರಾಜೇಶ್ ಶೆಟ್ಟಿಯವರು ವಿಖ್ಯಾತ್ ಶೆಟ್ಟಿಯವರ ಬಗ್ಗೆ ನಿಂದನಾತ್ಮಕ ಹಾಗೂ ವೈಯುಕ್ತಕ ತೇಜೋವಧೆ ಮಾಡಿ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅವರು ತಮ್ಮ ವೀಡಿಯೋದಲ್ಲಿ ವಿಖ್ಯಾತ್ ಶೆಟ್ಟಿ ಹಾಗೂ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಅವರ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಅಲ್ಲದೇ ಪವರ್ ಟಿವಿಯ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರೋಮೋವೊಂದರಲ್ಲಿ ಬಿಜೆಪಿ ನಾಯಕರಿಗೆ ಮುಜುಗರ ತರುವಂತಹ ವಿಡಿಯೋ ಪ್ರಕರಣ,ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೆಂಬಲಿಗನ ವಿಡಿಯೋ,ಶಾಸಕರ ಬೆಂಬಲಿಗನ ರಾಸಲೀಲೆ ಅಂತೆಲ್ಲಾ ಕಟ್ಟುಕಥೆ ಕಟ್ಟಿ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ವೈರಲ್ , ರಾಸಲೀಲೆ ವಿಡಿಯೋ ವಿಚಾರದಿಂದ ಯೋಗಿಗೆ ಭಾರಿ ಮುಜುಗರ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಹರಡಿ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ.ಇದರಿಂದ ಬಿಜೆಪಿ ಕಾರ್ಯಕರ್ತನ ತೇಜೋವಧೆ ಜತೆಗೆ ಆ ಕ್ಷೇತ್ರದ ಮಹಿಳೆಯರಿಗೂ ಬಾರಿ ಅಪಮಾನ ಮಾಡಿದಂತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ವೈಯುಕ್ತಿಕ ತೇಜೋವಧೆಯ ಮೂಲಕ ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ವಾತವರಣವನ್ನೇ ಕೆಡಿಸುತ್ತಿದ್ದಾರೆ. ಈ ಎಲ್ಲಾ ಅಪಪ್ರಚಾರದ ಹಿಂದೆ ಕಾಂಗ್ರೆಸಿನ ಅಭ್ಯರ್ಥಿಯ ಕುಮ್ಮಕ್ಕು ಇದೆಯೆಂದು ತಿಳಿಯುತ್ತಿದೆ. ಈ ರೀತಿಯ ಸುದ್ದಿ ಪ್ರಸಾರವು ಚುನಾವಣಾ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಿದೆ.ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.