ನ್ಯೂಸ್ ನಾಟೌಟ್ : ಪಂಚ ಕೇದಾರ ದೇಗುಲಗಳ ಪೈಕಿ ಒಂದಾದ ಮತ್ತು ಜಗತ್ತಿನಲ್ಲೇ ಅತಿ ಎತ್ತರದಲ್ಲಿರುವ ಶಿವ ದೇಗುಲ ತುಂಗನಾಥ ದೇವಾಲಯವು 5ರಿಂದ 6 ಡಿಗ್ರಿಯಷ್ಟು ವಾಲಿದೆ ಎಂದು ಪುರಾತತ್ವ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಅಧ್ಯಯನದಿಂದ ಈ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಉತ್ತರಾಭಿಮುಖವಾಗಿ ಮತ್ತು ಸಮುದ್ರಮಟ್ಟದಿಂದ ಬರೋಬ್ಬರಿ 12,800 ಅಡಿ ಎತ್ತರದಲ್ಲಿ ತುಂಗನಾಥ ದೇಗುಲವಿದೆ. ಗವ್ಹಾಲ್ ಹಿಮಾಲಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ಈ ಶಿವ ದೇವಸ್ಥಾನವು 5ರಿಂದ 6 ಡಿಗ್ರಿಯಷ್ಟು ವಾಲಿದರೆ, ದೇಗುಲದ ಸಂಕೀರ್ಣದಲ್ಲಿರುವ ಇತರೆ ಸಣ್ಣಪುಟ್ಟ ಕಟ್ಟಡಗಳು 10 ಡಿಗ್ರಿಗಳಷ್ಟು ವಾಲಿದೆ ಎಂದು ವರದಿ ತಿಳಿಸಿದೆ ಎನ್ನಲಾಗಿದೆ.
ಈ ವರದಿ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ಪುರಾತತ್ವ ಅಧಿಕಾರಿಗಳು, ಆದಷ್ಟು ಹೇಗ ತುಂಗನಾಥ ದೇಗುಲವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಇದನ್ನು ರಾಷ್ಟ್ರೀಯ ಮಹತ್ವ ಹೊಂದಿರುವ ಸಂರಕ್ಷಿತ ಸ್ಮಾರಕ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಿದೆ. ಜತೆಗೆ, ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಇಲಾಖೆ ಮುಂದಾಗಿದೆ.