ನ್ಯೂಸ್ ನಾಟೌಟ್: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಮತದಾನದ ದಿನ ಸಮೀಪಿಸುತ್ತಿರುವ ನಡುವೆ ಕೆಲವು ಮುಖಂಡರ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದೆ. ಚನ್ನಬಸಪ್ಪ ಹುಲ್ಲತ್ತಿ ಅವರ ಮನೆಯ ಮೇಲೆ ಇಂದು ದಾಳಿ ನಡೆಸಲಾಗಿದೆ. ಮುಂಜಾನೆಯೇ ಕಾರ್ಯಾಚರಣೆ ನಡೆಸಿರುವ ತೆರಿಗೆ ಅಧಿಕಾರಿಗಳು ಶೋಧಕಾರ್ಯ ಮುಗಿಸಿ ಹಲವು ದಾಖಲೆ ಹಾಗೂ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ಯಾಡಗಿ ಪಟ್ಟಣದ ವಿದ್ಯಾನಗರದಲ್ಲಿರುವ ಚನ್ನಬಸಪ್ಪ ಮನೆಯಲ್ಲಿ ಒಟ್ಟು 2 ಕೋಟಿ 85 ಲಕ್ಷ ರೂಪಾಯಿ ಪತ್ತೆಯಾಗಿದೆ ಎನ್ನಲಾಗಿದೆ. ಚನ್ನಬಸಪ್ಪ ಹುಲ್ಲತ್ತಿ ಈ ಹಿಂದೆ ಎಪಿಎಂಸಿ ಸಮಿತಿ ಅಧ್ಯಕ್ಷರಾಗಿದ್ದರು. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿವಾಸವಿದೆ.