ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣದ ಪೋಸ್ಟ್ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾದ ಪರಿಣಾಮ ಮಹಾರಾಷ್ಟ್ರದ ಅಕೋಲಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಶನಿವಾರ ರಾತ್ರಿ ಧಾರ್ಮಿಕ ಮುಖಂಡರೊಬ್ಬರ ಕುರಿತಾದ ವಿವಾದಾತ್ಮಕ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ ಪರಿಣಾಮ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿ ಘರ್ಷಣೆ ಸಂಭವಿಸಿದೆ ಎಂದು ವರದಿಯಾಗಿದೆ.
ಪೊಲೀಸರಿಗೆ ವಿಚಾರ ಗೊತ್ತಾಗಿ ಪರಿಸ್ಥಿತಿ ನಿಯಂತ್ರಣ ಮಾಡಲು ಯತ್ನಿಸಿದ್ದಾರೆ. ಆದರೆ ಎರಡು ಗಂಪುಗಳ ನಡುವಣ ಮಾತುಕತೆ ಘರ್ಷಣೆಗೆ ತಿರುಗಿದ್ದು, ಪರಿಣಾಮ ರಸ್ತೆಬದಿಯಿದ್ದ ವಾಹನಗಳಿಗೆ ಬೆಂಕಿ ಇಟ್ಟು, ಕಲ್ಲುತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಗಂಗಾಧರ ಚೌಕ್, ಪೋಲಾ ಚೌಕ್ ಮತ್ತು ಹರಿಹರ ಪೇಠ್ ಬಳಿಯ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದ್ದು, ಎರಡು ಭಿನ್ನ ಕೋಮಿನ ಜನರು ಪರಸ್ಪರ ಕಲ್ಲುತೂರಾಟ ಪೊಲೀಸ್ ವ್ಯಾನ್ , ಇತರ ವಾಹನಗಳಿಗೆ ಬೆಂಕಿಯಿಟ್ಟು ಹಾನಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಬಳಸಿದ್ದಾರೆ ಎಂದು ವರದಿ ತಿಳಿಸಿದೆ.
ಜನರನ್ನು ನಿಯಂತ್ರಿಸಲು ಅಕೋಲಾ ಜಿಲ್ಲೆ, ವಾಶಿಮ್, ಬುಲ್ಧಾನ ಮತ್ತು ಅಮರಾವತಿಯ ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಲಾಯಿತು. ಈವರೆಗೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.