ನ್ಯೂಸ್ ನಾಟೌಟ್: ಕಳೆದ ಐದು ವರ್ಷಗಳಲ್ಲಿ 41,000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB)ದ ಅಂಕಿಅಂಶಗಳ ಪ್ರಕಾರ, 2016 ರಲ್ಲಿ 7,105, 2017 ರಲ್ಲಿ 7,712, 2018 ರಲ್ಲಿ 9,246 ಮತ್ತು 2019 ರಲ್ಲಿ 9,268 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ತಿಳಿಸಿದೆ.
2020 ರಲ್ಲಿ, 8,290 ಮಹಿಳೆಯರು ಕಾಣೆಯಾಗಿದ್ದು, ಒಟ್ಟು 41,621 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಎನ್ ಸಿಆರ್ ಬಿ ವರದಿ ತಿಳಿಸಿದೆ.
ಅಹಮದಾಬಾದ್ ಮತ್ತು ವಡೋದರಾದಲ್ಲಿ ಕೇವಲ ಒಂದು ವರ್ಷದಲ್ಲಿ(2019-20) 4,722 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು 2021 ರಲ್ಲಿ ರಾಜ್ಯ ಸರ್ಕಾರವೇ ವಿಧಾನಸಭೆಗೆ ಮಾಹಿತಿ ನೀಡಿತ್ತು ಎನ್ನಲಾಗಿದೆ.
“ಕೆಲವು ನಾಪತ್ತೆ ಪ್ರಕರಣಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರನ್ನು ಗುಜರಾತ್ ಹೊರತುಪಡಿಸಿ ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ ಮತ್ತು ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿರುವುದನ್ನು ನಾನು ಗಮನಿಸಿದ್ದೇನೆ” ಎಂದು ಮಾಜಿ ಐಪಿಎಸ್ ಅಧಿಕಾರಿ ಮತ್ತು ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುಧೀರ್ ಸಿನ್ಹಾ ಹೇಳಿದ್ದರು.