ನ್ಯೂಸ್ ನಾಟೌಟ್: ನಮ್ಮನ್ನು ಆಳುವ ಸರಕಾರ, ಜನ ಪ್ರತಿನಿತಿನಿಧಿಗಳು ಜನಪ್ರಿಯ ಘೋಷಣೆ ಅಥವಾ ಜನಪರ ಯೋಜನೆಯ ಹೆಸರಲ್ಲಿ ಜನರ ಮೂಗಿಗೆ ಆಗಾಗ್ಗೆ ಬೆಣ್ಣೆ ಸವರುತ್ತಿರುತ್ತಾರೆ. ಈಗಂತೂ ಚುನಾವಣೆಯ ಸಮಯ, ಬೆಣ್ಣೆಯ ಜತೆಗೆ ಒಸಿ ಎಣ್ಣೆ ಹಚ್ಚುವ ಕೆಲಸವೂ ಜೋರಾಗಿ ನಡಿತಿದೆ.
ಆದರೂ ನಾವು ಏನೂ ಆಗಿಲ್ಲವೆಂಬಂತೆ ಹತ್ತರ ಒಟ್ಟಿಗೆ ಹನ್ನೊಂದು ಅನ್ನುವಂತೆ ಗುಂಪಿನಲ್ಲಿ ಗೋವಿಂದ ಎನ್ನುತ್ತಿರುತ್ತೇವೆ. ಮತ್ತೂ ಕೆಲವರು ಸ್ವಲ್ಪ ಮುಂದೆ ಹೋಗಿ ಸರಕಾರದ ಘೋಷಣೆಗೆ ಹಿರಿಹಿರಿ ಹಿಗ್ಗಿ ಮರುಳಾಗಿ ಖುಷಿಯಾಗಿ ಎಂತಹ ರಾಜಕಾರಣಿ ಅವ ಮಾರಾಯ.. ಎಷ್ಟು ಒಳ್ಳೆ ಅಭಿವೃದ್ಧಿ ಕೆಲಸ ಮಾಡುತ್ತಾನೆ ಎಂದು ಹೊಗಳಿಕೆಯ ಸುರಿಮಳೆಯನ್ನೇ ಸುರಿಸುತ್ತೇವೆ. ಭರ್ಜರಿ ಚಪ್ಪಾಳೆ ಹೊಡೆದು ಕೇಕೆ ಹಾಕುತ್ತೇವೆ. ಸಾಮಾಜಿಕ ಜಾಲತಾಣದಲ್ಲೂ ಹೊಗಳು ಭಟರು ಇರುವುದರಿಂದ ಪ್ರಚಾರ ಗಗನದೆತ್ತರಕ್ಕೆ ನೆಗೆದಿರುತ್ತದೆ.
ಸರಕಾರದ ಎಡವಟ್ಟು ಯೋಜನೆಗಳ ಪ್ರತ್ಯಕ್ಷ ಅನುಭವ ಆದಾಗ ನಮ್ಮ ರಕ್ತ ಕುದಿಯುತ್ತದೆ.
ಎಷ್ಟು ಸಲೀಸಾಗಿ ಜನರ ನಂಬಿಕೆಯನ್ನು ಗಿಟ್ಟಿಸಿಕೊಳ್ಳುತ್ತಾರೆ, ಜನಗಳ ಹೆಸರಲ್ಲಿ ಬಿಟ್ಟಿ ಓಟು ಗಿಟ್ಟಿಸಿಕೊಳ್ಳುತ್ತಾರೆ ಅನ್ನುವುದನ್ನು ಅರ್ಥೈಸಿಕೊಂಡಾಗ ಮನಸ್ಸಿಗೆ ನೋವಾಗುತ್ತದೆ. ಬಡ ಜನರಿಗೆ-ಮಧ್ಯಮ ವರ್ಗದ ಕುಟುಂಬದವರಿಗಾಗಿ ಇರುವ ಯೋಜನೆ ಹೆಸರಲ್ಲಿ ಮಂಕು ಬೂದಿ ಎರಚುತ್ತಿರುವ ಬಗ್ಗೆ ನಾವಿಲ್ಲಿ ಪ್ರತ್ಯಕ್ಷ ಉದಾಹರಣೆ ಸಹಿತ ನಿಮ್ಮ ಮುಂದೆ ವಿವರಿಸುತ್ತಿದ್ದೇವೆ. ಹಿರಿಯ ಪತ್ರಕರ್ತರೊಬ್ಬರು ಯಶಸ್ವಿನಿ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ದಾಖಲಾಗಲು ಪರದಾಡಿದ ಸಂಪೂರ್ಣ ಸ್ಟೋರಿಯನ್ನು ನಿಮ್ಮ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದೇವೆ.
ಇತ್ತೀಚಿಗೆ ಅನಾರೋಗ್ಯದ ನಿಮಿತ್ತ ಶಸ್ತ್ರಚಿಕಿತ್ಸೆಗಾಗಿ ಪತ್ರಕರ್ತರೊಬ್ಬರು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿದ್ದರು. ಆರಂಭದಲ್ಲಿ ವೈದ್ಯರು ರಿಪೋರ್ಟ್ ನೋಡಿ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ವಿವರಿಸಿದರು. ಬಳಿಕ ಯಾವುದಾದರೂ ಹೆಲ್ತ್ ಕಾರ್ಡ್ ಅಥವಾ ಕ್ಯಾಶ್ ಪೇಮೆಂಟ್ ಮೂಲಕ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವ ಆಯ್ಕೆ ನೀಡಿದ್ರು. ಯಶಸ್ವಿ ಯೋಜನೆ ಇದೆ , ಅದರಲ್ಲೇ ಮಾಡಿಸಿಕೊಳ್ಳುತ್ತೇನೆ ಎಂದು ರೋಗಿಯೂ ವೈದ್ಯರಲ್ಲಿ ಹೇಳಿದಾಗ ಡಾಕ್ಟರ್ ಮುಖದಲ್ಲಿ ನಗು ಮಾಯವಾಯಿತು. ಹಾಗಾದರೆ ನಿಮಗೆ ಜನರಲ್ ವಾರ್ಡ್ , ಆಪರೇಷನ್ ಗೆ ಒಂದು ವಾರ ಮುಂಚೆ ಬನ್ನಿ, ನಿಮ್ಮ (ಓಟಿ ಟೈಮ್) ಆಪರೇಷನ್ ಡೇಟ್ ಗೆ ಕಾಯಿರಿ, ಆಪರೇಷನ್ ಆದ ಬಳಿಕ ಇನ್ನೊಂದು ವಾರ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದರು.
ಅಷ್ಟು ದಿನ ಯಾಕೆ? ವಾರದಲ್ಲಿ ಮನೆಗೆ ತೆರಳಲು ಅವಕಾಶ ಇಲ್ವಾ? ಎಂದು ವೈದ್ಯರಿಗೆ ರೋಗಿ ಕೇಳಿದ್ರು. ಇದಕ್ಕೆ ಸ್ವಲ್ಪ ಸಿಟ್ಟಿನಿಂದಲೇ ಉತ್ತರಿಸಿದ ವೈದ್ಯ, ನೋಡ್ರಿ ಈ ಯಶಸ್ವಿನಿ ಹಣ ನಮ್ಮ ಕೈಗೆ ಬರುವ ತನಕ ನೀವು ಕಾಯಬೇಕಾಗುತ್ತದೆ. ಮುಂಚಿತವಾಗಿ ಒಂದಷ್ಟುಫಾರ್ಮ್ ಬರಿಬೇಕು. ಹಣ ಬರುವುದು ಕೆಲವೊಮ್ಮೆ ತಡವಾಗುತ್ತದೆ. ಇದರಿಂದ ಆಪರೇಷನ್ ಮಾಡುವುದು ಡಿಲೇ ಆಗುತ್ತದೆ. ಬೇಗ ಆಪರೇಷನ್ ಬೇಕು ಅಂದ್ರೆ ಹಣ ಕೊಡಿ, ಕೂಡಲೇ ಮಾಡುತ್ತೇವೆ. ವಾರದೊಳಗೆ ನೀವು ಮನೆಗೆ ಕೂಡ ಹೋಗಬಹುದು ಎಂದರು. ಇದರಿಂದ ಸ್ವಲ್ಪ ಆತಂಕಗೊಂಡ ರೋಗಿಯೂ ಡಾಕ್ಟ್ರೆ ನನಗೆ ಇಲ್ಲಿ ವೈದ್ಯರನ್ನು ಬದಲಾಯಿಸುವ ಅವಕಾಶ ಇದ್ಯಾ ಎಂದು ಕೇಳಿದ್ರು. ಇದಕ್ಕುತ್ತರಿಸಿದ ವೈದ್ಯರು, ನೋಡ್ರಿ ಸರಕಾರ 5 ರೂಪಾಯಿ ಕೊಟ್ಟು ಇದರಲ್ಲಿ ಬಿರಿಯಾನಿ ಮಾಡಿ ಎಂದು ವೈದ್ಯರಿಗೆ ಹೇಳುತ್ತದೆ, ಜನರ ಎದುರಿಗೆ ದುಡ್ಡು ಕೊಟ್ಟಿದ್ದೇವೆ ಅನ್ನುವ ನಂಬಿಕೆ ಹುಟ್ಟಿಸಿರುತ್ತಾರೆ. ಕಡಿಮೆ ಹಣ ಕೊಟ್ಟು ಜನರನ್ನು ಆಪರೇಷನ್ ಗೆ ಒಳಪಡಿಸುವ ಸರಕಾರ ಎಲ್ಲವನ್ನೂ ವೈದ್ಯರ ಮೇಲೆ ಹಾಕಿ ಕೈತೊಳೆದುಕೊಳ್ಳುತ್ತದೆ.
ಇರುವ ವೈದ್ಯ ಅವ ಚೆನ್ನಾಗಿ ಶಸ್ತ್ರ ಚಿಕಿತ್ಸೆ ಮಾಡ್ಲಿ ಅಥವಾ ಮಾಡದಿರಲಿ ನೀವು ಹಣವಿಲ್ಲದೆ ಯೋಜನೆ ಅಡಿಯಲ್ಲಿ ದಾಖಲಾಗಿರುವುದರಿಂದ ಆತನ ಕೈನಿಂದಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳ ಬೇಕು ಅಂದ್ರು ವೈದ್ಯರು. ಅಲ್ಲಿಗೆ ರೋಗಿಯ ಅರ್ಧ ಜಂಗಬಲವೇ ಕುಸಿದ ಅನುಭವ ಆಯಿತು. ಕೊನೆಗೆ ಬದುಕಿದ್ರೆ ಬೇಡಿ ಆದ್ರೆ ತಿಂದೇನು ಈ ಯೋಜನೆ ಅಡಿಯಲ್ಲಿ ದಾಖಲಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಒಳಗಾಗುವುದು ಬೇಡ ಎಂದು ಪತ್ರಕರ್ತ ನಿರ್ಧಾರಕ್ಕೆ ಬರುತ್ತಾರೆ. ಹಣ ಕೊಟ್ಟೇ ಒಳ್ಳೆಯ ವೈದ್ಯರ ಬಳಿ ತನಗಿಷ್ಟವಾದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಇದು ಯಶಸ್ವಿನಿ ಕಾರ್ಡ್ ನ ಮತ್ತೊಂದು ಸತ್ಯ ದರ್ಶನ, ನಿಮಗೂ ಇಂತಹ ಅನುಭವ ನಿಮಗೂ ಆಗಿದ್ದರೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.