ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಪೊಲೀಸರ ಅಮಾನುಷ ಕೃತ್ಯ ಖಂಡನೀಯ. ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಜತೆ ಚರ್ಚಿಸಿದ್ದು, ಘಟನೆಗೆ ಕಾರಣರಾದ ಡಿವೈಎಸ್ಪಿ, ಸಂಪ್ಯ ಠಾಣಾ ಎಸ್ಐ ಹಾಗೂ ಸಿಬ್ಬಂದಿ ವರ್ಗದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಬದಲಾದ ಮೇಲೆ ಪುತ್ತೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ಹಲವಾರು ಅಹಿತಕರ ಘಟನೆಗಳು ಸಂಭವಿಸಿವೆ. ಇದರಲ್ಲಿ ಪೊಲೀಸ್ ದೌರ್ಜನ್ಯವೂ ಸೇರಿದೆ. ಇಂತಹ ಕೃತ್ಯ ಮತ್ತೆ ಎಲ್ಲಿಯೂ ನಡೆಯಕೂಡದು. ದೌರ್ಜನ್ಯ ಎಸಗಿದ ಪೊಲೀಸರನ್ನು ಇಂದು ಸಂಜೆಯೊಳಗೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇವೆಲ್ಲವನ್ನ ಹಿಂದೂ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದಕ್ಕೆ ಈ ಕೂಡಲೇ ಕಡಿವಾಣ ಹಾಕದಿದ್ದಲ್ಲಿ ಹಿಂದೂ ಸಂಘಟನೆ ಸಂಘರ್ಷಕ್ಕೆ ಕಾರಣವಾಗಬಹುದು. ಶಾಂತಿ ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.