ನ್ಯೂಸ್ ನಾಟೌಟ್: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಬಾಲ್ -ಟಿ10 ಜಿಪಿಎಲ್ ಕ್ರಿಕೆಟ್ ಕೂಟದ ಮಂಗಳವಾರದ ಎರಡನೇ ಪಂದ್ಯಾಟದಲ್ಲಿ ಕುಕ್ಕನೂರು ತಂಡದ ವಿರುದ್ಧ ಜಿ. ಕಿಂಗ್ಸ್ ಸಿದ್ದಲಿಂಗಪುರ ತಂಡ ಗೆಲುವು ಸಾಧಿಸಿದೆ.
ಕುಕ್ಕನೂರು ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಜಿ.ಕೆ.ಎಸ್ ನಿಗದಿತ 10 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. ಇದು ಇಲ್ಲಿಯವರೆಗಿನ ಜಿಪಿಎಲ್ ಟೂರ್ನಮೆಂಟಿನ ಗರಿಷ್ಠ ಮೊತ್ತವಾಗಿದೆ. ಆರಂಭಿಕ ಆಟಗಾರ ಕೀಜನ ಯತೀಶ್ ಜಿಪಿಎಲ್ನ ಮೊತ್ತಮೊದಲ ಅರ್ಧ ಶತಕ ಗಳಿಸಿದರು. ಇವರ ಇನ್ನಿಂಗ್ಸ್ನಲ್ಲಿ 16 ಎಸೆತಗಳಿಗೆ ಭರ್ಜರಿ 3 ಸಿಕ್ಸರ್, 7 ಬೌಂಡರಿ ಒಳಗೊಂಡು 52 ಗಳಿಸಿದರು. ಮೊದಲ ವಿಕೆಟ್ಗೆ ರಾಕೇಶ್ ಮತ್ತು ಯತೀಶ್ 57 ರನ್ಗಳನ್ನು ಕಲೆಹಾಕಿದರು.
ಕುಕ್ಕನೂರು ತಂಡದ ಪರವಾಗಿ ಮೂಡಗದ್ದೆ ವಿನೋದ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಪಟ್ಟಡ ದೀಪಕ್ 2 ವಿಕೆಟ್ ಪಡೆದರು. ನಂತರ ಬ್ಯಾಟ್ ಮಾಡಿದ ಕುಕ್ಕನೂರು ತಂಡ 6.2 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿತು. ಈ ಸಂದರ್ಭ ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಜಿ.ಕಿಂಗ್ಸ್ ತಂಡ ವಿಜಯಿಯೆಂದು ನಿರ್ಧರಿಸಲಾಯಿತು. ಕೀಜನ ಯತೀಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ನಾಳೆ ( ಮೇ 24) ಬೆಳಗ್ಗೆ 9 ಗಂಟೆಗೆ ಜಿ ಕಿಂಗ್ಸ್ ಸಿದ್ದಲಿಂಗಪುರ (G.Kings Siddalingapura ) ತಂಡದ ಎದುರು ಕಾಫಿ ಕ್ರಿಕೆಟರ್ಸ್ (coffee cricketers) ಸೆಣಸಾಟ ನಡೆಸಲಿದೆ. ಮಧ್ಯಾಹ್ನ 1 ಗಂಟೆಗೆ ಕಾಫಿ ಕ್ರಿಕೆಟರ್ಸ್(Coffee cricketers) ಮತ್ತು ಟೀಮ್ ಭಗವತಿ (Team Bhagavath) ಎದುರಾಗಲಿವೆ.