ನ್ಯೂಸ್ ನಾಟೌಟ್: ರಾಷ್ಟ್ರಪತಿ ಮುರ್ಮು ಅವರು ಭಾಷಣ ಮಾಡುತ್ತಿರುವ ಸಂದರ್ಭ ವಿದ್ಯುತ್ ಕೈಕೊಟ್ಟ ಘಟನೆ ನಡೆದಿದೆ. ಆದರೆ, ಮೈಕ್ ಕೆಲಸ ಮಾಡುತ್ತಿದ್ದುದರಿಂದ ಅವರು ಮಾತು ಮುಂದುವರಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬರಿಪಾದದಲ್ಲಿರುವ ಮಹಾರಾಜ ಶ್ರೀರಾಮ್ ಚಂದ್ರ ಭಂಜ್ದೇವ್ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಮೇ 6ಕ್ಕೆ ನಡೆದ ಘಟಿಕೋತ್ಸವದಲ್ಲಿ ನಡೆದಿದೆ.
ವಿದ್ಯುತ್ ಕಡಿತಕ್ಕೆ ವಿಶ್ವವಿದ್ಯಾನಿಲಯದ ಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಹಾಗೂ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಪೂರ್ವಾಹ್ನ 11.56ರಿಂದ ಅಪರಾಹ್ನ 12.05ರ ವರೆಗೆ ವಿದ್ಯುತ್ ಕಡಿತವಾಗಿತ್ತು. ಜನರೇಟರ್ ಕಾರ್ಯ ನಿರ್ವಹಿಸದೇ ಇರುವುದರಿಂದ ಸಭಾಂಗಣದಲ್ಲಿ ಕತ್ತಲೆ ತುಂಬಿತ್ತು. ಈ ನಡುವೆ ರಾಷ್ಟ್ರಪತಿ ಅವರು ಪೋಡಿಯಂನಲ್ಲಿ ಅಳವಡಿಸಿದ್ದ ತಾತ್ಕಾಲಿಕ ಲೈಟ್ನಿಂದ ಭಾಷಣ ಮುಂದುವರಿಸಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಭಿಕರು ಕೂಡ ಕತ್ತಲೆಯಲ್ಲೇ ಅವರ ಭಾಷಣ ಕೇಳುವಂತಾಗಿತ್ತು.
ಈ ನಡುವೆ ವಿದ್ಯುತ್ ಕಡಿತಕ್ಕಾಗಿ ಎಲೆಕ್ಟ್ರೀಷಿಯನ್ ಜಯಂತ್ ತ್ರಿಪಾಠಿ ಅವರನ್ನು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಅಲ್ಲದೆ, ಲೋಪದೋಷಗಳ ತನಿಖೆಗೆ ಪಿಜಿ ಕೌನ್ಸಿಲ್ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡ ಮೂರು ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.